ADVERTISEMENT

ಮೇಕೆದಾಟು ಯೋಜನೆಗೆ ಅನುಮತಿ ಇಲ್ಲ: ದುರೈ ಮುರುಗನ್

ತಮಿಳುನಾಡು ಸರ್ವಪಕ್ಷ ನಿಯೋಗದಿಂದ ಜಲಶಕ್ತಿ ಸಚಿವರ ಭೇಟಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 20:56 IST
Last Updated 17 ಜುಲೈ 2021, 20:56 IST
ಮೇಕೆದಾಟು ಪ್ರದೇಶ (ಸಂಗ್ರಹ ಚಿತ್ರ)
ಮೇಕೆದಾಟು ಪ್ರದೇಶ (ಸಂಗ್ರಹ ಚಿತ್ರ)   

ನವದೆಹಲಿ/ಚೆನ್ನೈ: ತಮಿಳುನಾಡಿನ ಸರ್ವಪಕ್ಷ ನಿಯೋಗವು ಮೇಕೆದಾಟು ಯೋಜನೆ ಕುರಿತು ಕೇಂದ್ರ ಜಲಶಕ್ತಿ ಇಲಾಖೆ ಸಚಿವರನ್ನು ಭೇಟಿ ಮಾಡಿ ಚರ್ಚಿಸಿತು. ‘ಯೋಜನೆ ಕುರಿತು ಕರ್ನಾಟಕ ಸರ್ಕಾರ ಸಿದ್ಧಪಡಿಸಿದ ವಿವರವಾದ ಯೋಜನಾ ವರದಿ (ಡಿಪಿಆರ್) ಏಕಪಕ್ಷೀಯವಾಗಿದ್ದು, ಅದನ್ನು ಸ್ವೀಕರಿಸಲಾಗುವುದಿಲ್ಲ’ ಎಂದು ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ತಿಳಿಸಿದ್ದಾರೆ ಎಂದು ನಿಯೋಗ ಹೇಳಿಕೊಂಡಿದೆ.

ಯೋಜನೆ ಮುಂದುವರಿಸಲು ಕರ್ನಾಟಕ ಸರ್ಕಾರಕ್ಕೆ ತಮಿಳುನಾಡು, ಪುದುಚೇರಿ ಮತ್ತು ಕೇರಳದ ಅನುಮತಿ ಬೇಕಾಗುತ್ತದೆ ಎಂದು ಶೇಖಾವತ್ ನಿಯೋಗಕ್ಕೆ ತಿಳಿಸಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ದುರೈ ಮುರುಗನ್ ತಿಳಿಸಿದ್ದಾರೆ.

ಜುಲೈ 12ರಂದು ಚೆನ್ನೈನಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯದ ಪ್ರತಿಯನ್ನು ದುರೈ ಮುರುಗನ್ ನೇತೃತ್ವದ13 ರಾಜಕೀಯ ಪಕ್ಷಗಳ ಪ್ರತಿನಿಧಿಗಳ ನಿಯೋಗವು ಶೇಖಾವತ್‌ಗೆ ಹಸ್ತಾಂತರಿಸಿತು. ಕರ್ನಾಟಕದ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಬಾರದು ಎಂದು ನಿಯೋಗ ಮನವಿ ಮಾಡಿತು.

ADVERTISEMENT

‘ನಿಯಮಗಳನ್ನು ಪಾಲಿಸದ ಕರ್ನಾಟಕ ಸರ್ಕಾರಕ್ಕೆ ಮೇಕೆದಾಟು ಯೋಜನೆಗೆ ಅನುಮತಿ ನೀಡುವ ಕುರಿತಂತೆ ಯಾವುದೇ ಭರವಸೆ ನೀಡಿಲ್ಲ’ ಎಂಬುದಾಗಿ ಶೇಖಾವತ್ ತಿಳಿಸಿದ್ದಾರೆ ಎಂದು ಮುರುಗನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.