ADVERTISEMENT

ವಿಶೇಷ ಸಮಗ್ರ ಪರಿಷ್ಕರಣೆ: ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವ ತಮಿಳುನಾಡು ಸರ್ಕಾರ

ಪಿಟಿಐ
Published 2 ನವೆಂಬರ್ 2025, 14:28 IST
Last Updated 2 ನವೆಂಬರ್ 2025, 14:28 IST
ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್
ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್    ಕಡತ ಚಿತ್ರ

 ಚೆನ್ನೈ: ತಮಿಳುನಾಡಿನಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌)  ಆರಂಭಗೊಳ್ಳಲು ಎರಡು ದಿನ ಬಾಕಿ ಉಳಿದಿರುವಂತೆ, ಇದರ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ಡಿಎಂಕೆ ಮತ್ತು ಮಿತ್ರ ಪಕ್ಷಗಳು ನಿರ್ಧರಿಸಿವೆ. ಭಾನುವಾರ ಇಲ್ಲಿ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಿಳಿಸಿದರು. 

ನವೆಂಬರ್‌ 4ರಿಂದ ಡಿಸೆಂಬರ್‌ 4ರವರೆಗೆ ನಡೆಯಲಿರುವ ‘ಎಸ್‌ಐಆರ್‌’ ಕೈಬಿಡಬೇಕು ಎಂದು ಕಾಂಗ್ರೆಸ್‌ ಮತ್ತು ಎಡಪಕ್ಷಗಳು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದು, ವಿಧಾನಸಭಾ ಚುನಾವಣೆಯ ನಂತರ, ಮುಂದಿನ ವರ್ಷ ಇದನ್ನು ನಿಷ್ಪಕ್ಷಪಾತವಾಗಿ ನಡೆಸಬೇಕು ಎಂದು ಆಗ್ರಹಿಸಿವೆ.

ಸ್ಟಾಲಿನ್ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ 46 ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಆದರೆ, ನಟ ವಿಜಯ್‌ ಅವರ ಟಿವಿಕೆ ಪಕ್ಷ, ಪಿಎಂಕೆ, ಎಎಂಎಂಕೆ ಸೇರಿದಂತೆ ಎಐಎಡಿಎಂಕೆ– ಬಿಜೆಪಿ ಮೈತ್ರಿಕೂಟದ ಭಾಗವಾಗಿರದ ಇತರ ಪಕ್ಷಗಳು ಸಭೆಯನ್ನು ಬಹಿಷ್ಕರಿಸಿದ್ದವು. 

ADVERTISEMENT

‘ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದ ಕೈಗೊಂಬೆಯಾಗಿ ಚುನಾವಣಾ ಆಯೋಗ ವರ್ತಿಸುತ್ತಿದೆ’ ಎಂದು ಆರೋಪಿಸಿದ ಸರ್ವಪಕ್ಷ ಸಭೆಯು, ಎಸ್‌ಐಆರ್‌ ಜಾರಿ ವಿರುದ್ಧದ ನಿರ್ಣಯವನ್ನು ಅಂಗೀಕರಿಸಿತು.

‘ಎಸ್‌ಐಆರ್‌’ ನಡೆಸಲು ಉದ್ದೇಶಿಸಿರುವ ಸಮಯದಲ್ಲಿ ಮತ್ತು ಮತದಾರರ ಅಂತಿಮ ಪಟ್ಟಿ ಪ್ರಕಟವಾಗುವುದಕ್ಕಿಂತ (ಜ.31)  ಮೊದಲೇ  ‘ಪೊಂಗಲ್‌ ಮತ್ತು ಕ್ರಿಸ್‌ಮಸ್‌ ಹಬ್ಬ ಇರುವುದರಿಂದ ಸಾಕಷ್ಟು ಜನರಿಗೆ ಇದರಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಇದರಿಂದ  ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಟ್ಟು ಹೋಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.  ಆದರೆ, ಚುನಾವಣಾ ಆಯೋಗದ ಇದನ್ನು ಒಪ್ಪದ ಸಂದರ್ಭದಲ್ಲಿ ನಾವು ಸುಪ್ರೀಂಕೋರ್ಟ್‌ ಮೊರೆ ಹೋಗುವುದಲ್ಲದೆ, ಬೇರೆ ದಾರಿ ಇಲ್ಲ’ ಎಂದು ಸ್ಟಾಲಿನ್‌ ಹೇಳಿದರು.

ಎಐಎಡಿಎಂಕೆ ಮತ್ತು ಬಿಜೆಪಿ ಎಸ್‌ಐಆರ್‌ ಸ್ವಾಗತಿಸಿದ್ದು, ಚುನಾವಣೆಯಲ್ಲಿ ಸೋಲುವ ಭಯದಿಂದಲೇ ಡಿಎಂಕೆ ಇದನ್ನು ವಿರೋಧಿಸಿದೆ ಎಂದು ದೂರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.