ಪ್ರಜಾವಾಣಿ ವಾರ್ತೆ
ಚೆನ್ನೈ: ‘ಕರೂರಿನಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ‘ಪಕ್ಷದ ನಾಯಕ’ನೇ ಹೊಣೆ. ಪಕ್ಷದ ರ‍್ಯಾಲಿ ಸ್ಥಳಕ್ಕೆ ಅವರು ತಡವಾಗಿ ಬಂದಿದ್ದೇ ದುರ್ಘಟನೆಗೆ ಕಾರಣ’ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿಧಾನಸಭೆಯಲ್ಲಿ ಬುಧವಾರ ಹೇಳಿದರು.
ವಿರೋಧ ಪಕ್ಷಗಳ ಸದಸ್ಯರ ಗದ್ದಲದ ನಡುವೆಯೇ, ಕರೂರಿನಲ್ಲಿ ಸಂಭವಿಸಿದ ಕಾಲ್ತುಳಿತ ಕುರಿತು ಹೇಳಿಕೆ ನೀಡಿದ ಸ್ಟಾಲಿನ್, ಟಿವಿಕೆ ಪಕ್ಷದ ಮುಖ್ಯಸ್ಥ ಹಾಗೂ ನಟ ವಿಜಯ್ ಅವರ ಹೆಸರನ್ನು ಉಲ್ಲೇಖಿಸಲಿಲ್ಲ. ತಮ್ಮ ಮಾತಿನುದ್ದಕ್ಕೂ ‘ಪಕ್ಷದ ನಾಯಕ’ ಎಂದೇ ಹೇಳಿದರು.
‘ಪಕ್ಷವು ಘೋಷಿಸಿದ ಪ್ರಕಾರ, ‘ಪಕ್ಷದ ನಾಯಕ’ ಮಧ್ಯಾಹ್ನ 12ಕ್ಕೆ ವೇದಿಕೆಗೆ ಬರಬೇಕಿತ್ತು. ಆದರೆ, ಏಳು ಗಂಟೆಯಷ್ಟು ತಡವಾಗಿ, ರಾತ್ರಿ 7ಕ್ಕೆ ವೇದಿಕೆಗೆ ಬಂದರು. ಇದು ಕಾಲ್ತುಳಿತಕ್ಕೆ ಕಾರಣವಾಯಿತಲ್ಲದೇ, 41 ಜನರು ಪ್ರಾಣ ಕಳೆದುಕೊಂಡರು’ ಎಂದು ಹೇಳಿದರು.
‘ಟಿವಿಕೆ ಪಕ್ಷವು ರ‍್ಯಾಲಿ ನಡೆಸುವುದಕ್ಕಾಗಿ ಎರಡು ಸ್ಥಳಗಳನ್ನು ಸೂಚಿಸಿತ್ತು. ಅವುಗಳನ್ನು ತಿರಸ್ಕರಿಸಿದ್ದ ಕರೂರು ಜಿಲ್ಲಾಡಳಿತ, ವೇಲುಸ್ವಾಮಿಪುರಂನಲ್ಲಿ ಬಹಿರಂಗ ಸಭೆ ನಡೆಸಲು ಅನುಮತಿ ನೀಡಿತ್ತು. ಇದಕ್ಕಾಗಿ 11 ಷರತ್ತುಗಳನ್ನು ವಿಧಿಸಿತ್ತು’ ಎಂದೂ ಸ್ಟಾಲಿನ್ ಸದನಕ್ಕೆ ವಿವರಿಸಿದರು.
‘ಬಹಿರಂಗ ಸಭೆಗೆ ‘ಪಕ್ಷದ ನಾಯಕ’ ಹಾಗೂ ಪಕ್ಷವು ಸಮರ್ಪಕ ವ್ಯವಸ್ಥೆ ಮಾಡಿರಲಿಲ್ಲ. ಕುಡಿಯುವ ನೀರು ಸೇರಿ ಯಾವುದೇ ಮೂಲಸೌಕರ್ಯಗಳನ್ನು ಸಹ ಒದಗಿಸಿರಲಿಲ್ಲ’ ಎಂದು ಟೀಕಿಸಿದರು.
ಅಗತ್ಯ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಿರಲಿಲ್ಲ ಎಂಬ ಆರೋಪಗಳನ್ನು ತಳ್ಳಿ ಹಾಕಿದ ಅವರು, ‘ಕರೂರು ಜಿಲ್ಲಾಡಳಿತ ಮೂವರು ಎಎಸ್‌ಪಿ, ಐವರು ಡಿವೈಎಸ್‌ಪಿ, 18 ಜನ ಇನ್ಸ್‌ಪೆಕ್ಟರ್, 75 ಎಐಗಳು ಸೇರಿ 517 ಅಧಿಕಾರಿಗಳನ್ನು ನಿಯೋಜಿಸಿತ್ತು. ಇತರ ಜಿಲ್ಲೆಗಳಿಂದ ಹೆಚ್ಚುವರಿಯಾಗಿ 99 ಸಿಬ್ಬಂದಿಯನ್ನು ಸಹ ಕರೆಸಿಕೊಳ್ಳಲಾಗಿತ್ತು’ ಎಂದು ಸದನಕ್ಕೆ ವಿವರಿಸಿದರು.
‘ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ.ಪಳನಿಸ್ವಾಮಿ ಹಮ್ಮಿಕೊಂಡಿದ್ದ ರೋಡ್ ಶೋ ಯಾವುದೇ ಸಮಸ್ಯೆಗೆ ಆಸ್ಪದವಾಗದಂತೆ ಸುಗಮವಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು ಶಿಸ್ತಿನಿಂದ ವರ್ತಿಸಿದರು. ಆದರೆ, ಟಿವಿಕೆ ಮುಖ್ಯಸ್ಥನ ಅನೇಕ ಬೆಂಬಲಿಗರು ರ‍್ಯಾಲಿ ನಿಗದಿಯಾಗಿದ್ದ ಸ್ಥಳದವರೆಗೆ ಅವರ ವಾಹನ ಹಿಂಬಾಲಿಸಿದರು’ ಎಂದು ಕುಟುಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.