ADVERTISEMENT

ಜಯಲಲಿತಾ ಬಂಗಲೆ ಸ್ವಾಧೀನ: ಸೋದರ ಸೊಸೆಯ ವಿರೋಧ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 14:03 IST
Last Updated 25 ಜುಲೈ 2020, 14:03 IST
ಜಯಲಲಿತಾ
ಜಯಲಲಿತಾ   

ಚೆನ್ನೈ: ಪೊಯಸ್‌ ಗಾರ್ಡನ್‌ನಲ್ಲಿರುವ ಜಯಲಲಿತಾ ಅವರ ಬಂಗಲೆಯನ್ನುಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ತಮಿಳುನಾಡು ಸರ್ಕಾರ ಚಾಲನೆ ನೀಡಿದ್ದು, ಸಿವಿಲ್‌ ಕೋರ್ಟ್‌ನಲ್ಲಿ ₹ 67.9 ಕೋಟಿ ಠೇವಣಿ ಇರಿಸಿದೆ. ಆದರೆ, ಸೋದರ ಸೊಸೆ ಸರ್ಕಾರದ ಈ ಕ್ರಮವನ್ನು ವಿರೋಧಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

24, 322 ಚದರ ಅಡಿಯಿರುವ ಈ ನಿವಾಸವನ್ನು ಸ್ಮಾರಕವಾಗಿ ಪರಿವರ್ತಿಸುವ ಯೋಜನೆ ಸರ್ಕಾರದ್ದಾಗಿದೆ.

ಈ ಸಂಬಂಧ, ಜಯಲಲಿತಾ ಅವರು ಬಾಕಿ ಉಳಿಸಿಕೊಂಡಿದ್ದ ₹ 36.9 ಕೋಟಿ ಹಣವನ್ನು ಆದಾಯ ತೆರಿಗೆ ಇಲಾಖೆಗೆ ಪಾವತಿಸಲಾಗಿದೆ. ಉಳಿದ ₹ 31 ಕೋಟಿ ಹಣವನ್ನು ಜಯಲಲಿತಾ ಅವರ ಸಹೋದರನ ಮಕ್ಕಳಾದ ದೀಪಾ ಜಯಕುಮಾರ್‌ ಮತ್ತು ದೀಪಕ್‌ ಜಯಕುಮಾರ್‌ ಅವರಿಗೆ ಹಂಚಿಕೆ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ.

ADVERTISEMENT

1960ರ ದಶಕದ ಉತ್ತರಾರ್ಧದಲ್ಲಿ ಜಯಲಲಿತಾ ಅವರ ತಾಯಿ ಸಂಧ್ಯಾ ಅವರು ಖರೀದಿಸಿದ ಪೊಯಸ್ ಗಾರ್ಡನ್ ಬಂಗಲೆಯ ಕೀಲಿಗಳನ್ನು ಕೋರಿ ದೀಪಕ್ ಕಳೆದ ವಾರ ನ್ಯಾಯಾಲಯದ ಮೊರೆ ಹೋದ ಬೆನ್ನಲ್ಲೇಸರ್ಕಾರ ಈ ಕ್ರಮ ತೆಗೆದುಕೊಂಡಿದೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರಿಗೆ ಸೋದರಳಿಯ ಮತ್ತು ಸೋದರ ಸೊಸೆಯೇ ಕಾನೂನುಬದ್ಧ ವಾರಸುದಾರರು ಎಂದು ಮದ್ರಾಸ್‌ ಹೈಕೋರ್ಟ್‌ ಕಳೆದ ಮೇ ತಿಂಗಳಿನಲ್ಲಿ ಘೋಷಿಸಿತ್ತು.

ಸರ್ಕಾರದ ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವ ಜಯಲಲಿತಾ ಅವರ ಸೋದರ ಸೊಸೆ ದೀಪಾ,ಇದು ತಮ್ಮ ಪೂರ್ವಜರ ಆಸ್ತಿಯಾಗಿದ್ದು, ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

‘ಕಾನೂನುಬದ್ಧ ವಾರಸುದಾರರನ್ನಾಗಿ ನ್ಯಾಯಾಲಯ ಘೋಷಿಸಿದೆ. ಹೀಗಿರುವಾಗ ಈ ರೀತಿಯ ಕ್ರಮ ತೆಗೆದುಕೊಳ್ಳಲು ಅವರ‍್ಯಾರು. ಸರ್ಕಾರ ಸ್ವಾಧೀನ ಪ್ರಕ್ರಿಯೆಯನ್ನು ಸರಿಯಾದ ರೀತಿಯಲ್ಲಿ ಮಾಡಿಲ್ಲ. ಎಲ್ಲಾ ಬಾಕಿಗಳನ್ನು ಪಾವತಿಸಲು ನಾವು ತಯಾರಿದ್ದೇವೆ. ಅದು ದೊಡ್ಡ ಬಂಗಲೆ ಎಂದು ನಾನು ಹೋರಾಟ ನಡೆಸುತ್ತಿಲ್ಲ. ಅದು ಗುಡಿಸಲಾಗಿದ್ದರೂ, ನಾನು ಇದೇ ರೀತಿ ನಡೆದುಕೊಳ್ಳುತ್ತಿದ್ದೆ. ಏಕೆಂದರೆ, ಅಲ್ಲಿ ನಮ್ಮ ಪೂರ್ವಜರ ನೆನಪುಗಳಿವೆ’ ಎಂದು ದೀಪಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.