ADVERTISEMENT

ಬಾಂಗ್ಲಾದೇಶದ ದುರ್ಗತಿಗೆ ಯೂನಸ್ ಕಾರಣ: ತಸ್ಲೀಮಾ ನಸ್ರೀನ್

‘ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿ ನಿಲ್ಲಲಿ‘

ಪಿಟಿಐ
Published 9 ಜನವರಿ 2026, 14:34 IST
Last Updated 9 ಜನವರಿ 2026, 14:34 IST
   

ತಿರುವನಂತಪುರ: ‘ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್‌ ಯೂನಸ್ ಧಾರ್ಮಿಕ ಉಗ್ರಗಾಮಿಗಳೊಂದಿಗೆ ಕೈಜೋಡಿಸಿದ್ದು, ದೇಶ ವಿಭಜಕ ಶಕ್ತಿಗಳ ಬಲವನ್ನು ಹೆಚ್ಚಿಸಿದ್ದಾರೆ’ ಎಂದು ಬಾಂಗ್ಲಾದೇಶದಿಂದ ಗಡೀಪಾರಾಗಿರುವ ಲೇಖಕಿ ತಸ್ಲೀಮಾ ನಸ್ರೀನ್ ಆರೋಪಿಸಿದ್ದಾರೆ.

ಇಲ್ಲಿ ಶುಕ್ರವಾರ ನಡೆದ ಕೇರಳ ವಿಧಾನಸಭೆ ಅಂತರರಾಷ್ಟ್ರೀಯ ಪುಸ್ತಕ ಉತ್ಸವ (ಕೆಎಲ್‌ಬಿಎಫ್‌)–ನಾಲ್ಕನೆಯ ಆವೃತ್ತಿಯಲ್ಲಿ, ‘ಶಾಂತಿಗಾಗಿ ಪುಸ್ತಕ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

‘ಮತಾಂಧರು ಮತ್ತು ಜಿಹಾದಿಗಳ ವಿರುದ್ಧ ಬಾಂಗ್ಲಾದೇಶದ ಸರ್ಕಾರ ಕ್ರಮ ಕೈಗೊಂಡಿದ್ದರೆ, ದೇಶವು ಇಂದಿನ ಅಧೋಗತಿಗೆ ಇಳಿಯುತ್ತಿರಲಿಲ್ಲ’ ಎಂದು ಅವರು ಹೇಳಿದರು.

ADVERTISEMENT

‘ನೊಬೆಲ್ ಶಾಂತಿ ಪುರಸ್ಕೃತರೂ ಆಗಿರುವ ಮೊಹಮದ್ ಯೂನಸ್‌, ‘ಜಾತ್ಯತೀತತೆ ಹಾಗೂ ಜನಸಾಮಾನ್ಯರ ಸುರಕ್ಷತೆಗೆ ಧಕ್ಕೆ ತರುವ ಕಾರ್ಯಸೂಚಿಯನ್ನು ಬೆಂಬಲಿಸುತ್ತಿದ್ದಾರೆ. ನನ್ನ ಪುಸ್ತಕದ ವಿಚಾರದಲ್ಲಿ ಕೆಲವು ಮತಾಂಧರು, ಧಾರ್ಮಿಕ ಉಗ್ರಗಾಮಿಗಳು ಫತ್ವಾ ಹೊರಡಿಸಿದ್ದಾರೆ. ಅವರ ವಿರುದ್ಧ ಯಾವುದೇ ಕ್ರಮ ವಹಿಸದ ಅಲ್ಲಿನ ಸರ್ಕಾರ, ನನ್ನ ವಿರುದ್ಧವೇ ಬಂಧನದ ವಾರಂಟ್‌ ಹೊರಡಿಸಿದೆ’ ಎಂದು ತಸ್ಲೀಮಾ ದೂರಿದರು.

ಧರ್ಮದ ಅಸ್ತ್ರ: ‘ಬಾಂಗ್ಲಾದೇಶದ ಸರ್ಕಾರ ತನ್ನ ಸ್ವಂತ ರಾಜಕೀಯ ಹಿತಾಸಕ್ತಿಗಾಗಿ ಹಾಗೂ ಸಾಧ್ಯವಾದಷ್ಟು ಕಾಲ ಅಧಿಕಾರದಲ್ಲಿ ಉಳಿಯಲು ‘ಧರ್ಮ’ವನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಶೈಕ್ಷಣಿಕ ಸಂಸ್ಥೆ, ವೈಜ್ಞಾನಿಕ ಅಧ್ಯಯನ ಕೇಂದ್ರಗಳನ್ನು ತೆರೆಯುವ ಬದಲು, ಮತಾಂಧರ  ಬೆಂಬಲದೊಂದಿಗೆ ‘ಧಾರ್ಮಿಕ ಶಾಲೆ’ಗಳನ್ನು ತೆರೆಯುತ್ತಿರುವುದು ಆತಂಕಕಾರಿ ಎಂದರು. 

‘ಬಾಂಗ್ಲಾ ವಿಮೋಚನೆ ಹೇಗೆನ್ನುವುದು ತಿಳಿಯುತ್ತಿಲ್ಲ’

ಬಾಂಗ್ಲಾದೇಶದ ಈಗಿನ ಅರಾಜಕತೆಗೆ ಮಧ್ಯಂತರ ಸರ್ಕಾರವೇ ಕಾರಣ ಎಂದಿರುವ ತಸ್ಲೀಮಾ ನಸ್ರೀನ್ ‘ಒಂದರ್ಥದಲ್ಲಿ ಈಗ ಅಲ್ಲಿ ಮೂಲಭೂತವಾದಿಗಳೇ ಅಧಿಕಾರದಲ್ಲಿದ್ದಾರೆ. ಮೊಹಮದ್ ಯೂನಸ್‌ ಅವರನ್ನು ಬೆಂಬಲಿಸುತ್ತಿದ್ದಾರೆ. 1971ರಲ್ಲಿ ಇದೇ ವಿಚಾರಕ್ಕೆ ಪಾಕಿಸ್ತಾನದ ವಿರುದ್ಧ ಹೋರಾಟ ನಡೆಸಿದ್ದ ಈ ಜಾತ್ಯತೀತ ದೇಶವನ್ನು ಇವರ ಕೈಗಳಿಂದ ರಕ್ಷಿಸುವುದು ಹೇಗೆನ್ನುವುದು ತಿಳಿಯುತ್ತಿಲ್ಲ’ ಎಂದು ಹೇಳಿದ್ದಾರೆ.   ‘ಸದ್ಯ ಬಾಂಗ್ಲಾ ವಿಭಜನೆಯಾಗಿದೆ. ಅಲ್ಲಿನ ಮುಸ್ಲಿಂ ಉಗ್ರಗಾಮಿಗಳು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಯನ್ನು ತಕ್ಷಣ ನಿಲ್ಲಿಸಬೇಕು’ ಎಂದೂ ತಸ್ಲೀಮಾ ನಸ್ರೀನ್ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.