ADVERTISEMENT

ಬುರ್ಖಾ ನಿಷೇಧದಿಂದ ಭಯೋತ್ಪಾದನೆ ನಿಲ್ಲಲ್ಲ: ತಸ್ಲೀಮಾ

ಪಿಟಿಐ
Published 1 ಮೇ 2019, 12:30 IST
Last Updated 1 ಮೇ 2019, 12:30 IST
   

ನವದೆಹಲಿ: ಸರಣಿ ಬಾಂಬ್‌ ಸ್ಫೋಟದ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿ ಬುರ್ಖಾ ನಿಷೇಧಿಸಿರುವ ಕ್ರಮವನ್ನು ಲೇಖಕಿ ತಸ್ಲೀಮಾ ನಸ್ರೀನ್‌ ಸ್ವಾಗತಿಸಿದ್ದಾರೆ.

’ಬುರ್ಖಾ ನಿಷೇಧ ಮಾಡುವುದರಿಂದ ಭಯೋತ್ಪಾದನೆ ನಿಲ್ಲುವುದಿಲ್ಲ ಎಂದು ಜನರು ಹೇಳುತ್ತಿದ್ದಾರೆ. ನಾನು ಇದನ್ನು ಒಪ್ಪುತ್ತೇನೆ. ಆದರೆ, ಮಹಿಳೆಯರು ತಮ್ಮದೆ ಆದ ವ್ಯಕ್ತಿತ್ವ ಇಲ್ಲದೆ ಬದುಕುವುದನ್ನು ಇದು ಖಂಡಿತ ತಡೆಯುತ್ತದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಬುರ್ಖಾ ನಿಷೇಧಿಸುವುದರಿಂದ ಧಾರ್ಮಿಕ ಸ್ವಾತಂತ್ರ್ಯಹರಣವಾಗುತ್ತದೆ ಎಂದು ಹಲವರು ಹೇಳುತ್ತಿದ್ದಾರೆ. ಹತ್ಯೆ ಮಾಡುವುದನ್ನು ನಿಷೇಧಿಸಿದರೂ, ಧಾರ್ಮಿಕ ಸ್ವಾತಂತ್ರ್ಯ ಕಸಿದುಕೊಂಡಂತೆ ಆಗುತ್ತದೆ ಎಂದೂ ಇವರು ಹೇಳುತ್ತಾರೆ. ಯಾರಿಗೆ ಇಸ್ಲಾಂನಲ್ಲಿ ನಂಬಿಕೆ ಇಲ್ಲವೋ ಅಂಥವರನ್ನು ಸಾಯಿಸಿ ಎಂದು ಕುರಾನ್‌ ಹೇಳುತ್ತದೆ. ಇನ್ನೊಬ್ಬರಿಗೆ ಹಾನಿಯುಂಟು ಮಾಡುವ ಮೂಲಕ ಧಾರ್ಮಿಕ ಸ್ವಾಂತಂತ್ರ್ಯವನ್ನು ಅನುಭವಿಸುವ ಹಕ್ಕು ಯಾರಿಗೂ ಇಲ್ಲ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ADVERTISEMENT

ಪವಿತ್ರ ಗ್ರಂಥಗಳಲ್ಲಿ ಹೇಳಿದಂತೆ ಹಿಂಸಾಚಾರವನ್ನು ಖಂಡಿಸೋಣ. ದೇವರ ಹೆಸರಿನಲ್ಲಿ ನಡೆಯುವ ಹತ್ಯೆಗಳನ್ನು ಖಂಡಿಸೋಣ. ಮನುಷ್ಯನ ಜೀವದ ಪಾವಿತ್ರ್ಯತೆಯಲ್ಲಿ ನಂಬಿಕೆಯಿಡಬೇಕು ಎಂದು ತಿಳಿಸಿದ್ದಾರೆ.

‘ಲಜ್ಜಾ’ ಮುಂದುವರಿದ ಭಾಗ 2020ಕ್ಕೆ ಬಿಡುಗಡೆ

ಲೇಖಕಿ ತಸ್ಲೀಮಾ ನಸ್ರೀನ್ ಅವರ ನಿಷೇಧಿತ ‘ಲಜ್ಜಾ’ ಪುಸ್ತಕದ ಮುಂದುವರಿದ ಭಾಗ 2020ಕ್ಕೆ ಬಿಡುಗಡೆ ಆಗಲಿದೆ.

ಕೋಮು ಗಲಭೆಯ ನಂತರದ ಪರಿಣಾಮಗಳನ್ನು ಈ ಪುಸ್ತಕ ಒಳಗೊಂಡಿದ್ದು, ‌ಬಾಬರಿ ಮಸೀದಿ ಧ್ವಂಸದ ನಂತರ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳಿಗೆಎದುರಾದ ಪರಿಸ್ಥಿತಿಯನ್ನು ಪುಸ್ತಕದಲ್ಲಿ ಹಿಡಿದಿಡಲಾಗಿದೆ.

ಕೋಮು ಸೌಹಾರ್ದಕ್ಕೆ ದಕ್ಕೆ ತರುತ್ತದೆ ಎಂದು ಈ ಪುಸ್ತಕಕ್ಕೆ ನಿಷೇಧ ಹೇರಲಾಗಿದೆ.ಲಜ್ಜಾದ ಮುಂದುವರಿದ ಭಾಗವನ್ನು ಅರುನವಾಸಿನ್ಹಾ ತರ್ಜುಮೆ ಮಾಡಿದ್ದು, ಹಾರ್ಪರ್‌ಕಾಲಿನ್ಸ್‌ ಸಂಸ್ಥೆ ಪ್ರಕಟಿಸಲಿದೆ.

ಕಾದಂಬರಿಯಲ್ಲಿ ಸುರಂಜನ್‌ ಮತ್ತು ಕುಟುಂಬ ನೆಮ್ಮದಿ ಅರಿಸಿ ಬಾಂಗ್ಲಾದಿಂದ ಕೋಲ್ಕತ್ತಕ್ಕೆ ಬರುತ್ತದೆ. ಅಲ್ಲಿಯೂ ಅವರ ಸಮಸ್ಯೆಗೆ ಪರಿಹಾರ ದೊರಕುವುದಿಲ್ಲ. ಇದೇ ಸಮಸ್ಯೆಯನ್ನು ತಸ್ಲೀಮಾ ಅವರು ಎದುರಿಸಿದ್ದಾರೆ.

‘ಪಿತೃಪ್ರಭುತ್ವ, ಸ್ತ್ರೀದ್ವೇಷ ಮತ್ತು ಧಾರ್ಮಿಕ ಅಸಹಿಷ್ಣುತೆ ಮಾನವೀಯತೆಗೆ ಅಡ್ಡಿಯುಂಟು ಮಾಡುತ್ತದೆ. ಈ ಸಮಸ್ಯೆ ಬಾಂಗ್ಲಾದೇಶದಲ್ಲಿ ಇದ್ದಂತೆ ಭಾರತದಲ್ಲಿಯೂ ಪ್ರಚಲಿತದಲ್ಲಿದೆ. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗುವುದರಿಂದ ಇಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯುವುದು ಸಾಧ್ಯವಿಲ್ಲ. ಈ ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅಗತ್ಯ’ ಎಂದು ತಸ್ಲೀಮಾ ತಿಳಿಸಿದ್ದಾರೆ.

ಧಾರ್ಮಿಕ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಬಾಂಗ್ಲಾದಿಂದ ಗಡಿಪಾರಾಗಿದ್ದ ತಸ್ಲೀಮಾ,ಸದ್ಯ ದೆಹಲಿಯಲ್ಲಿ ವಾಸವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.