ADVERTISEMENT

ಅಧಿಕಾರಕ್ಕೆ ಮರಳಿದ ನಂತರವೇ ವಿಧಾನಸಭೆ ಪ್ರವೇಶ: ಚಂದ್ರಬಾಬು ನಾಯ್ಡು ಪ್ರತಿಜ್ಞೆ

ಪಿಟಿಐ
Published 19 ನವೆಂಬರ್ 2021, 11:21 IST
Last Updated 19 ನವೆಂಬರ್ 2021, 11:21 IST
ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು   

ಆಂಧ್ರಪ್ರದೇಶ: ಅಧಿಕಾರ ವಹಿಸಿಕೊಂಡ ನಂತರವಷ್ಟೆ ಮತ್ತೆ ಆಂಧ್ರಪ್ರದೇಶ ವಿಧಾನಸಭೆಗೆ ಕಾಲಿಡುವುದಾಗಿ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ಶುಕ್ರವಾರ ಪ್ರತಿಜ್ಞೆ ಮಾಡಿದ್ದಾರೆ.

ಆಡಳಿತಾರೂಢ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಸದಸ್ಯರು ತಮ್ಮ ಮೇಲೆ ಮಾಡುತ್ತಿರುವ ನಿರಂತರ ನಿಂದನೆಯಿಂದ ತಾವು ಮನನೊಂದಿರುವುದಾಗಿ ವಿರೋಧ ಪಕ್ಷದ ನಾಯಕರೂ ಆಗಿರುವ ನಾಯ್ಡು ಅವರು ಸದನದಲ್ಲಿ ಭಾವುಕವಾಗಿ ನುಡಿದರು.

‘ಕಳೆದ ಎರಡೂವರೆ ವರ್ಷಗಳಿಂದ ಅವರು ಮಾಡುತ್ತಿರುವ ಅವಮಾನಗಳನ್ನು ಸಹಿಸಿಕೊಂಡು ಸುಮ್ಮನಿದ್ದೆ. ಇಂದು ನನ್ನ ಪತ್ನಿಯನ್ನೂ ಗುರಿಯಾಗಿಸಿದ್ದಾರೆ. ನಾನು ಯಾವಾಗಲೂ ಗೌರವದಿಂದ ಮತ್ತು ಗೌರವಕ್ಕಾಗಿ ಬದುಕಿದ್ದೇನೆ. ಇನ್ನು ಇದನ್ನು ಸಹಿಸಲಾಗುವುದಿಲ್ಲ’ ಎಂದು ಹೇಳಿದರು.

ADVERTISEMENT

ನಾಯ್ಡು ತಮ್ಮ ಮಾತು ಮುಂದುವರೆಸಿದ್ದರು. ಆದರೆ ಆಡಳಿತ ಪಕ್ಷದ ಸದಸ್ಯರು ಇದೊಂದು ನಾಟಕ ಎಂದು ಕೂಗಾಡಿದರು. ಪರಿಸ್ಥಿತಿ ಶಾಂತಗೊಳಿಸಲು ಸ್ಪೀಕರ್‌ ತಮ್ಮಿನೇನಿ ಸೀತಾರಾಮ್‌ ಅವರು ನಾಯ್ಡು ಅವರ ಮೈಕ್‌ ಅನ್ನು ಆರಿಸಿದರು.

ಸದನದಲ್ಲಿ ಕೃಷಿ ವಲಯಕ್ಕೆ ಸಂಬಂಧಿಸಿದ ಕಿರು ಚರ್ಚೆಯ ವೇಳೆ ಉಭಯ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಚಂದ್ರಬಾಬು ನಾಯ್ಡು ತಮ್ಮ ಹತಾಶೆಯನ್ನು ಮಾತುಗಳಲ್ಲಿ ಹೊರಹಾಕಿದರು.

ಬಳಿಕ ತಮ್ಮ ಕೊಠಡಿಗೆ ತೆರಳಿದ ನಾಯ್ಡು ಅವರು ಪಕ್ಷದ ಶಾಸಕರೊಂದಿಗೆ ಸಭೆ ನಡೆಸಿದರು. ಈ ವೇಳೆ ನಾಯ್ಡು ಭಾವುಕರಾಗಿ ಕಣ್ಣೀರು ಹಾಕಿದರು. ಇದರಿಂದ ದಿಗ್ಭ್ರಮೆಗೊಳಗಾದ ಶಾಸಕರು ನಾಯ್ಡು ಅವರನ್ನು ಸಮಾಧಾನಗೊಳಿಸಿದರು. ನಂತರ ಸದನಕ್ಕೆ ಬಂದ ನಾಯ್ಡು ಈ ಘೋಷಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.