ಬಹರಾಯಿಚ್: ಸರ್ಕಾರಿ ಶಾಲೆಯಲ್ಲಿ ಆಯೋಜನೆಗೊಂಡಿದ್ದ ಓಟದ ಸ್ಪರ್ಧೆಯ ಪೂರ್ವಭಾವಿ ಸಿದ್ಧತೆಯ ಸಂದರ್ಭದಲ್ಲಿ ಮೂರನೆಯವಳಾಗಿ ಹೊರಹೊಮ್ಮಿದ 15 ವರ್ಷದ ಬಾಲಕಿ ಸಂಭ್ರಮಿಸುವ ಮುನ್ನವೇ ಆಕೆಯನ್ನು ಸಾವು ಬರಸೆಳೆದ ಘಟನೆ ಉತ್ತರ ಪ್ರದೇಶದ ಬಹರಾಯಿಚ್ ಜಿಲ್ಲೆಯ ನಾನ್ಪುರದಲ್ಲಿ ಗುರುವಾರ ನಡೆದಿದೆ.
ಮೃತ ಬಾಲಕಿ 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಭಾಗಾಪೂರ್ವದ ನಿವಾಸಿ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ 12 ಜನ ಸಹಪಾಠಿಗಳೊಂದಿಗೆ 100 ಮೀ ಓಟದಲ್ಲಿ ಪಾಲ್ಗೊಂಡಿದ್ದ ಈಕೆ ಮೂರನೆಯವಳಾಗಿ ಹೊರಹೊಮ್ಮಿದ್ದಳು ಎಂದು ಶಾಲೆಯ ಮೂಲಗಳು ತಿಳಿಸಿವೆ.
ಓಟ ಪೂರ್ಣಗೊಂಡ ಕೆಲವೇ ಕ್ಷಣಗಳಲ್ಲಿ ಪ್ರಜ್ಞೆ ತಪ್ಪಿ ಕುಸಿದುಬಿದ್ದಳು. ತಕ್ಷಣ ಆಂಬುಲೆನ್ಸ್ ಮೂಲಕ ಈಕೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು. ಆದರೆ ಅದಾಗಾಗಲೇ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯ ಡಾ. ಸುರೇಶ್ ವರ್ಮಾ ಘೋಷಿಸಿದರು
ಪ್ರಾಥಮಿಕ ಪರೀಕ್ಷೆಯಲ್ಲಿ ಬಾಲಕಿಯು ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ಸಾವಿಗೆ ನೈಜ ಕಾರಣ ತಿಳಿಯಲಿದೆ. ಕ್ರೀಡೆ ಹಾಗೂ ದೈಹಿಕ ವ್ಯಾಯಾಮದ ಸಮಯದಲ್ಲಿ ಹದಿಹರೆಯದವರು ಹೃದಯ ಸ್ತಂಭನಕ್ಕೆ ಒಳಗಾಗುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ ಎಂದು ವೈದ್ಯರು ಹೇಳಿದ್ದಾರೆ.
ಮೃತ ಬಾಲಕಿಯು ಯಾವುದೇ ಆನಾರೋಗ್ಯದಿಂದ ಬಳಲುತ್ತಿರಲಿಲ್ಲ, ಕಾಲೇಜಿನಲ್ಲಿ ಸುಡು ಬಿಸಿಲಿನಲ್ಲಿ ಓಟದ ಸ್ಪರ್ಧೆಯನ್ನು ನಡೆಸಲಾಗಿದೆ. ಸಕಾಲದಲ್ಲಿ ವೈದ್ಯಕೀಯ ಸೌಲಭ್ಯ ದೊರೆತಿದ್ದರೆ ಜೀವ ಉಳಿಯುತಿತ್ತು. ಶಾಲೆಯ ಉದಾಸೀನವೇ ಸಾವಿಗೆ ಕಾರಣ ಎಂದು ಬಾಲಕಿಯ ಅಣ್ಣ ಶಿವಂ ಆರೋಪಿಸಿದ್ದಾರೆ.
ಶಾಲೆಯ ಪ್ರಾಂಶುಪಾಲ ಅರವಿಂದ ಮಿಶ್ರಾ ಬಾಲಕಿಯ ಸಾವಿಗೆ ಆಘಾತ ವ್ಯಕ್ತಪಡಿಸಿದ್ದಾರೆ
ಬಾಲಕಿಯ ಕುಟುಂಬದವರು ಘಟನೆಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಿಲ್ಲವಾದರು ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಠಾಣಾಧಿಕಾರಿ ರಾಮಜ್ಞ ಸಿಂಗ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.