ನವದೆಹಲಿ: ‘ತೆಲಂಗಾಣದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಹಿಂದುಳಿದ ವರ್ಗಗಳಿಗೆ ನೀಡಿರುವ ಮೀಸಲಾತಿ ಪ್ರಮಾಣವನ್ನು ಶೇಕಡ 67ಕ್ಕೆ ಹೆಚ್ಚಿಸಲು ಅವಕಾಶ ಕಲ್ಪಿಸುವ ಮಸೂದೆ ಜಾರಿಗೆ ಬಿಜೆಪಿ ಅಡೆತಡೆ ಸೃಷ್ಟಿಸುತ್ತಿದೆ. ಇಲ್ಲದಿದ್ದರೆ ನಾಲ್ಕು ತಿಂಗಳಿಂದ ಈ ಮಸೂದೆಗೆ ರಾಷ್ಟ್ರಪತಿ ಒಪ್ಪಿಗೆಯನ್ನು ಯಾಕೆ ತಡೆಹಿಡಿಯಲಾಗಿದೆ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
‘ಸಾಮಾಜಿಕ ನ್ಯಾಯದ ಬಗ್ಗೆ ಬಿಜೆಪಿಗೆ ಇರುವ ಬದ್ಧತೆಯನ್ನು ಇದು ತೋರಿಸುತ್ತದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ತೆಲಂಗಾಣ ಪರಿಶಿಷ್ಟ ಜಾತಿಗಳ ಮಸೂದೆ– 2025’ ಅನ್ನು 2025ರ ಮಾರ್ಚ್ 17ರಂದು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿತ್ತು. ಮಾರ್ಚ್ 30ರಂದು ಈ ಮಸೂದೆಯನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗಿತ್ತು. ಈಗ ನಾಲ್ಕು ತಿಂಗಳಿಂದ ಒಪ್ಪಿಗೆಗೆ ಕಾಯಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.
‘ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಬಿಹಾರ ವಿಧಾನಸಭೆಯಲ್ಲಿ 2023ರ ನವೆಂಬರ್ 9ರಂದು ಮಸೂದೆ ಅಂಗೀಕರಿಸಲಾಗಿತ್ತು. ನವೆಂಬರ್ 10ರಂದು ರಾಷ್ಟ್ರಪತಿ ಒಪ್ಪಿಗೆಗೆ ಕಳುಹಿಸಲಾಗಿತ್ತು. ನವೆಂಬರ್ 21ರಿಂದಲೇ ಕಾಯ್ದೆ ಜಾರಿಗೆ ಬಂತು’ ಎಂದೂ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.