ADVERTISEMENT

ತಪ್ಪು ಫಲಿತಾಂಶ: ಪರೀಕ್ಷಾ ಸಿಬ್ಬಂದಿ ಅಮಾನತು

ತಪ್ಪು ಫಲಿತಾಂಶದ ಆಘಾತದಿಂದ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳು

ಪಿಟಿಐ
Published 29 ಏಪ್ರಿಲ್ 2019, 18:30 IST
Last Updated 29 ಏಪ್ರಿಲ್ 2019, 18:30 IST
   

ಹೈದರಾಬಾದ್‌: ದ್ವಿತೀಯ ಪಿಯುಸಿ ಫಲಿತಾಂಶ ಅವ್ಯವಸ್ಥೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷಕರಾಗಿ ಕಾರ್ಯನಿರ್ವಹಿಸಿದ ಉಪನ್ಯಾಸಕಿಗೆ ದಂಡ ವಿಧಿಸಲಾಗಿದ್ದು, ಮೌಲ್ಯಮಾಪನ ಮೇಲ್ವಿಚಾರಕರಾಗಿದ್ದ ಉಪನ್ಯಾಸಕರೊಬ್ಬರನ್ನು ಅಮಾನತುಗೊಳಿಸಲಾಗಿದೆ.

ತೆಲುಗು ಪತ್ರಿಕೆಯಲ್ಲಿ ವಿದ್ಯಾರ್ಥಿನಿಯೊಬ್ಬರು 99 ಅಂಕಗಳನ್ನು ಗಳಿಸಿದ್ದರೂ, ‘00’ ಎಂದು ನಮೂದಿಸಲಾಗಿತ್ತು. ವಿದ್ಯಾರ್ಥಿನಿ ನೀಡಿದ ದೂರಿನ ಅನ್ವಯ ತೆಲಂಗಾಣ ರಾಜ್ಯ ಶಿಕ್ಷಣ ಪರೀಕ್ಷಾ ಮಂಡಳಿ (ಟಿಎಸ್‌ಬಿಐಇ) ಈ ಕ್ರಮ ಕೈಗೊಂಡಿದೆ.

‘ಪರೀಕ್ಷಕರಾಗಿ ಕಾರ್ಯನಿರ್ವಹಿಸಿದ ಖಾಸಗಿ ಶಿಕ್ಷಣ ಸಂಸ್ಥೆಯ ಉಪನ್ಯಾಸಕಿ ಜಿ. ಉಮಾದೇವಿ ಎಂಬುವರಿಗೆ ಟಿಎಸ್‌ಬಿಐಇ ₹5000 ದಂಡ ವಿಧಿಸಿದೆ. ಅಲ್ಲದೆ ಇವರ ಮೇಲಧಿಕಾರಿಯಾಗಿ ಮತ್ತೊಮ್ಮೆ ಉತ್ತರ ಪತ್ರಿಕೆ ಪರಿಶೀಲನೆ ಮಾಡಬೇಕಿದ್ದ ಉಪನ್ಯಾಸಕ ಎಸ್. ವಿನಯ್‌ಕುಮಾರ್ ಎಂಬುವರನ್ನು ಅಮಾನತುಗೊಳಿಸಿ ವಿಚಾರಣೆಗೆ ಆದೇಶಿಸಲಾಗಿದೆ’ ಎಂದು ಟಿಎಸ್‌ಬಿಐಇ ತಿಳಿಸಿದೆ. ಪರೀಕ್ಷೆಯ ಫಲಿತಾಂಶವನ್ನು ಏಪ್ರಿಲ್‌ 18ರಂದು ಪ್ರಕಟಿಸಲಾಗಿತ್ತು.

ADVERTISEMENT

ವಿದ್ಯಾರ್ಥಿಗಳ ಆತ್ಮಹತ್ಯೆ:ಪಿಯುಸಿ ಫಲಿತಾಂಶ ಗೊಂದಲದ ಗೂಡಾಗಿ ಮಾರ್ಪಟ್ಟಿದ್ದು, ಉತ್ತೀರ್ಣರಾಗಿದ್ದ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಎಂದು ಘೋಷಿಸಿದ್ದರಿಂದ, ಪರೀಕ್ಷೆ ಚೆನ್ನಾಗಿ ಬರೆದಿದ್ದಾಗಿಯೂ ಕಡಿಮೆ ಅಂಕಗಳು ಬಂದಿವೆ ಎಂದು ಘೋಷಿಸಿದ್ದ ಪರಿಣಾಮ ಈವರೆಗೆ 23 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪ್ರತಿಭಟನೆ ತೀವ್ರ:ಸರ್ಕಾರದ ವಿರುದ್ಧ ಪೋಷಕರು, ಶಿಕ್ಷಣ ಸಂಸ್ಥೆಗಳು ಆಕ್ರೋಶ ವ್ಯಕ್ತಪಡಿಸಿವೆ. ರಾಜಕೀಯ ಪಕ್ಷಗಳು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿವೆ. ಉತ್ತರ ಪತ್ರಿಕೆಗಳ ಪುನರ್‌ ಮೌಲ್ಯಮಾಪನಕ್ಕೆ ಒತ್ತಾಯಿಸಿವೆ. ಅಲ್ಲದೆ, ಶಿಕ್ಷಣ ಸಚಿವ ಜಿ. ಜಗದೀಶ ರೆಡ್ಡಿ ರಾಜೀನಾಮೆ ನೀಡಬೇಕು,ಟಿಎಸ್‌ಬಿಐಇ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿವೆ.

ಬಿಜೆಪಿ ಪ್ರತಿಭಟನೆ ತೀವ್ರಗೊಳಿಸಿದ್ದು, ತೆಲಂಗಾಣ ರಾಜ್ಯಘಟಕದ ಅಧ್ಯಕ್ಷ ಕೆ. ಲಕ್ಷ್ಮಣ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ವಿದ್ಯಾರ್ಥಿಗಳಿಗಾದ ಅನ್ಯಾಯ ಸರಿಪಡಿಸಲು ಆಗ್ರಹಿಸಿ ಈ ಉಪವಾಸ ಸತ್ಯಾಗ್ರಹ ಆರಂಭಿಸಿರುವುದಾಗಿ ಅವರು ತಿಳಿಸಿದ್ದಾರೆ.

ಸಮಿತಿ ರಚನೆ:ಫಲಿತಾಂಶ ಪ್ರಕಟಣೆ ವೇಳೆ ಆದ ಎಡವಟ್ಟು ಕುರಿತು ತನಿಖೆ ನಡೆಸಲು ಸರ್ಕಾರ ಈಗಾಗಲೇ ತ್ರಿಸದಸ್ಯ ಸಮಿತಿ ರಚಿಸಿದೆ.

‘ತಪ್ಪು ಫಲಿತಾಂಶದ ಬಗ್ಗೆ ವಿದ್ಯಾರ್ಥಿಗಳು, ಪೋಷಕರು ಆತಂಕ ಪಡುವ ಅಗತ್ಯವಿಲ್ಲ. ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳ ಪುನರ್‌ ಪರಿಶೀಲನೆ ಅಥವಾ ಪುನರ್‌ ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು. ಈ ಪ್ರಕ್ರಿಯೆಗೆ ಯಾವುದೇ ಶುಲ್ಕ ಭರಿಸಬೇಕಾಗಿಲ್ಲ’ ಎಂದು ಶಿಕ್ಷಣ ಇಲಾಖೆ ಕಾರ್ಯದರ್ಶಿ ಬಿ. ಜನಾರ್ದನ ರೆಡ್ಡಿ ಹೇಳಿದ್ದಾರೆ.

‘ಅನುತ್ತೀರ್ಣರಾದ ವಿದ್ಯಾರ್ಥಿಗಳು ಪುನರ್‌ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಅವರ ಉತ್ತರ ಪತ್ರಿಕೆಗಳನ್ನು ಮತ್ತೊಮ್ಮೆ ಪರಿಶೀಲಿಸಲಾಗುವುದು’ ಎಂದು ಸರ್ಕಾರ ಹೇಳಿದೆ.

ಪರೀಕ್ಷಾ ಅಕ್ರಮ: ಫಲಿತಾಂಶಕ್ಕೆ ತಡೆ

ಮುಜಾಫ್ಫರ್‌ ನಗರ:ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಹಂತದ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಿಲ್ಲೆಯ 1,428 ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ.

ಪರೀಕ್ಷಾ ಅರ್ಜಿಯ ಜೊತೆಗೆ ಈ ವಿದ್ಯಾರ್ಥಿಗಳು ನಕಲಿ ಪ್ರಮಾಣ ಪತ್ರ ನೀಡಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.