ADVERTISEMENT

ತೆಲಂಗಾಣ: ಚಲಿಸುತ್ತಿರುವ ರೈಲಿನ ಜತೆ ವಿಡಿಯೊ ಶೂಟಿಂಗ್‌ಗೆ ಯತ್ನಿಸಿದ ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2022, 5:46 IST
Last Updated 5 ಸೆಪ್ಟೆಂಬರ್ 2022, 5:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್: ಚಲಿಸುತ್ತಿರುವ ರೈಲಿನ ಜತೆ ವಿಡಿಯೊ ಶೂಟಿಂಗ್‌ ಮಾಡಲು ಯತ್ನಿಸಿದ ಯುವಕ ರೈಲಿನಡಿ ಸಿಲುಕಿ ಮೃತಪಟ್ಟ ಘಟನೆ ತೆಲಂಗಾಣದ ಹನುಮಕೊಂಡ ಜಿಲ್ಲೆಯ ಕಾಳಿಪೇಟ್ ಎಂಬಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಮೃತಪಟ್ಟ ವ್ಯಕ್ತಿಯನ್ನು ಹನುಮಕೊಂಡ ಜಿಲ್ಲೆಯ ವಡ್ಡಪಲ್ಲಿ ಗ್ರಾಮದ ನಿವಾಸಿ, ಎಂಜಿನಿಯರಿಂಗ್ ವಿದ್ಯಾರ್ಥಿ ಚಿಂತಕುಲ ಅಕ್ಷಯರಾಜ್ (17) ಎಂದು ಗುರುತಿಸಲಾಗಿದೆ.

ರೈಲು ಹಿಂದಿನಿಂದ ಬರುತ್ತಿದ್ದಾಗ ಅಕ್ಷಯರಾಜ್ ಕೈಗಳನ್ನು ಜೇಬಿನಲ್ಲಿರಿಸಿ ವಿಡಿಯೊಗೆ ಪೋಸ್ ಕೊಡುತ್ತಾ ಹಳಿಯ ಮೇಲೆ ನಡೆದು ಬರುತ್ತಿದ್ದರು. ಅವರ ಸ್ನೇಹಿತ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದರು. ರೈಲು ಹತ್ತಿರ ಬರುತ್ತಿರುವ ಬಗ್ಗೆ ಸ್ನೇಹಿತ ಎಚ್ಚರಿಕೆ ನೀಡುತ್ತಿರುವುದು ಮತ್ತು ಕೆಲವೇ ಕ್ಷಣಗಳಲ್ಲಿ ರೈಲು ಡಿಕ್ಕಿ ಹೊಡೆದು ಅಕ್ಷಯರಾಜ್ ಬದಿಗೆ ಎಸೆಯಲ್ಪಟ್ಟಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ADVERTISEMENT

ಗಂಭೀರವಾಗಿ ಗಾಯಗೊಂಡಿರುವ ಅಕ್ಷಯರಾಜ್ ಅನ್ನು ವಾರಂಗಲ್‌ನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.

ಅಕ್ಷಯರಾಜ್ ಅವರು ಸ್ನೇಹಿತರ ಜತೆ ರೈಲು ಹಳಿಯ ಬಳಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ, ವೇಗವಾಗಿ ಚಲಿಸುತ್ತಿರುವ ರೈಲಿನ ಸಮೀಪ ನಡೆಯುತ್ತಿರುವ ವಿಡಿಯೊ ಚಿತ್ರೀಕರಣ ಮಾಡಬೇಕು ಮತ್ತು ಅದನ್ನು ಸಾಮಾಜಿಕ ಮಾಧ್ಯಮಗಳಿಗೆ ಅಪ್ಲೋಡ್ ಮಾಡಬೇಕು ಎಂದು ಬಯಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.