
ರಾಯಸೇನ್: ಮಧ್ಯಪ್ರದೇಶದ ರಾಯಸೇನ್ ಜಿಲ್ಲೆಯ ಗ್ರಾಮವೊಂದರಲ್ಲಿ ‘ರೇಡಿಯೊಸೊಂಡೆ’ ಎಂದು ಕರೆಯಲಾಗುವ ಹವಾಮಾನ ಮಾಪಕವೊಂದು ಆಕಾಶದಿಂದ ಬಿದ್ದಿದೆ. ಇದನ್ನು ಕಂಡ ಜನರು, ಇದೊಂದು ಸ್ಫೋಟಕವಿರಬಹುದೆಂದು ಆತಂಕಕ್ಕೀಡಾಗಿದ್ದರು.
ಸ್ಥಳೀಯರು ಈ ಬಗ್ಗೆ ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಬಂದ ಅಧಿಕಾರಿಗಳು ಉಪಕರಣವನ್ನು ವಶಪಡಿಸಿಕೊಂಡರು. ಬಳಿಕ ಇದೊಂದು ಟೆಲಿಮೆಟ್ರಿ ಉಪಕರಣ ಎಂದು ದೃಢಪಡಿಸಿದರು.
ಮಾರ್ಖಂಡಿ ಗ್ರಾಮದ ವಸತಿ ಪ್ರದೇಶದಲ್ಲಿ, ಬುಧವಾರ ಸಂಜೆ ‘ರೇಡಿಯೊಸೊಂಡೆ’ಯು ಕೆಳಗೆ ಬೀಳುತ್ತಿದ್ದಂತೆಯೇ ಜನರು ಭಯಭೀತರಾಗಿ, ತಮ್ಮ ಮನೆಗಳನ್ನು ತೊರೆದು ಕೃಷಿ ಜಮೀನುಗಳ ಕಡೆಗೆ ಓಡಿ ಹೋಗಿದ್ದರು.
‘ಉಪಕರಣದ ಮೇಲೆ ‘ಮಲೇಷ್ಯಾ ಹವಾಮಾನ ಇಲಾಖೆ’ ಎಂದು ಬರೆಯಲಾಗಿದೆ. ಹೀಗಾಗಿ ಇದು ಮಲೇಷ್ಯಾದ ಸಾಧನವಾಗಿರಬಹುದು. ಪ್ರಬಲವಾದ ಗಾಳಿಯಿಂದಾಗಿ ಇದು ಸಾವಿರಾರು ಕಿ.ಮೀವರೆಗೆ ಸಾಗಿರಬಹುದು’ ಎಂದು ಪೊಲೀಸರು ತಿಳಿಸಿದರು.
‘ರೇಡಿಯೊಸೊಂಡೆ’ ಎಂಬುದು ಬ್ಯಾಟರಿ ಚಾಲಿತ ಟೆಲಿಮೆಟ್ರಿ ಉಪಕರಣವಾಗಿದ್ದು, ಸಾಮಾನ್ಯವಾಗಿ ಇದನ್ನು ವಾತಾವರಣದಲ್ಲಿ ಸಾಗಿಸಲಾಗುತ್ತದೆ. ಇದು ವಿವಿಧ ಸ್ಥಳಗಳಲ್ಲಿನ ಹವಾಮಾನವನ್ನು ಅಳೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.