ADVERTISEMENT

ಹೊಸ ಮೆಸೇಜಿಂಗ್‌ ಆ್ಯಪ್‌ನತ್ತ ಹೊರಳಿದ ಪಾಕ್‌ ಉಗ್ರರು

ಪಿಟಿಐ
Published 24 ಜನವರಿ 2021, 12:09 IST
Last Updated 24 ಜನವರಿ 2021, 12:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶ್ರೀನಗರ: ‘ವೈಯಕ್ತಿಕ ಮಾಹಿತಿ ಕಳವು ಪ್ರಕರಣಗಳು ಹೆಚ್ಚುತ್ತಿರುವ ಹೊತ್ತಿನಲ್ಲಿ ವಾಟ್ಸ್‌ಆ್ಯಪ್‌ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳ ಬಳಕೆ ಸುರಕ್ಷಿತವಲ್ಲ ಎಂಬ ಚರ್ಚೆಗಳು ಶುರುವಾಗಿವೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಉಗ್ರ ಸಂಘಟನೆಗಳು ಹಾಗೂ ಅವುಗಳನ್ನು ನಿರ್ವಹಿಸುತ್ತಿರುವವರು ಹೊಸ ಮೆಸೆಜಿಂಗ್‌ ಆ್ಯಪ್‌ಗಳ ಮೊರೆ ಹೋಗಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಎನ್‌ಕೌಂಟರ್‌ನಲ್ಲಿ ಹತರಾದ ಹಾಗೂ ಭದ್ರತಾ ಸಿಬ್ಬಂದಿಯ ಎದುರು ಶರಣಾದ ಉಗ್ರರಿಂದ ಮಾಹಿತಿ ಕಲೆಹಾಕಿದಾಗ ಅವರು ಮೂರು ಹೊಸ ಆ್ಯಪ್‌ಗಳನ್ನು ಬಳಸುತ್ತಿರುವುದು ಗೊತ್ತಾಗಿದೆ’ ಎಂದು ಅವರು ಹೇಳಿದ್ದಾರೆ.

ಭದ್ರತೆಯ ಕಾರಣದಿಂದಾಗಿ ಆ್ಯಪ್‌ಗಳ ಹೆಸರು ಬಹಿರಂಗಪಡಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ.

ADVERTISEMENT

ಅಮೆರಿಕ, ಯುರೋಪ್‌ ಹಾಗೂ ಟರ್ಕಿಯ ಕಂಪನಿಗಳು ಅಭಿವೃದ್ಧಿಪಡಿಸಿರುವ ಆ್ಯಪ್‌ಗಳನ್ನು ಅವರು ಬಳಕೆ ಮಾಡುತ್ತಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಉಗ್ರರನ್ನು ನೇಮಿಸುವುದೂ ಸೇರಿದಂತೆ ಇತರ ಕಾರ್ಯಗಳಿಗಾಗಿ ಟರ್ಕಿಯ ಆ್ಯಪ್‌ ಅನ್ನು ಹೆಚ್ಚಾಗಿ ಬಳಸುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

ಈ ಆ್ಯಪ್‌ಗಳು ಅತಿ ಕಡಿಮೆ ವೇಗದ ಇಂಟರ್‌ನೆಟ್‌ನಲ್ಲೂ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿವೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ (2019ರ ಆಗಸ್ಟ್‌) ನಂತರ ಕೇಂದ್ರ ಸರ್ಕಾರವು ಕಣಿವೆ ನಾಡಿನಲ್ಲಿ ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸಿತ್ತು. ಹೋದ ವರ್ಷದ ಆರಂಭದಲ್ಲಿ 2ಜಿ ಇಂಟರ್‌ನೆಟ್‌ ಸೇವೆ ಒದಗಿಸಲಾಗಿತ್ತು. ಆ ಸಮಯದಲ್ಲಿ ಉಗ್ರರು ಹೊಸ ಆ್ಯಪ್‌ಗಳ ಮೂಲಕ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದರು.

‘ಉಗ್ರ ಸಂಘಟನೆಗಳು ವಾಟ್ಸ್‌ಆ್ಯಪ್‌ ಹಾಗೂ ಫೇಸ್‌ಬುಕ್‌ ಮೆಸೆಂಜರ್‌ ಬಳಕೆಯನ್ನು ಸ್ಥಗಿತಗೊಳಿಸಿವೆ. ಅವುಗಳ ಬದಲಾಗಿ ಆರ್‌ಎಸ್‌ಎ–2048 ತಂತ್ರಾಂಶವನ್ನು ಒಳಗೊಂಡಿರುವ ಹೊಸ ಆ್ಯಪ್‌ಗಳ ಮೊರೆ ಹೋಗಿವೆ. ಬಳಕೆದಾರರ ನಡುವೆ ವಿನಿಮಯವಾಗುತ್ತಿದ್ದ ದತ್ತಾಂಶಗಳು ಮೂರನೇ ವ್ಯಕ್ತಿಗೆ ಸೋರಿಕೆಯಾಗುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ನಂತರ ವರ್ಲ್ಡ್‌ ವೈಡ್‌ ವೆಬ್‌ನಲ್ಲಿ ಉಚಿತವಾಗಿ ಲಭ್ಯವಿದ್ದ ಹೊಸ ಆ್ಯಪ್‌ಗಳನ್ನು ಬಳಸಲು ಶುರುಮಾಡಿವೆ’ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಕಾಶ್ಮೀರದಲ್ಲಿ ಈ ಆ್ಯಪ್‌ಗಳನ್ನು ನಿರ್ಬಂಧಿಸಬೇಕಿದೆ. ಆ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ’ ಎಂದೂ ಅವರು ಹೇಳಿದ್ದಾರೆ.

ಉಗ್ರ ಸಂಘಟನೆಗಳು ವರ್ಚುವಲ್‌ ಸಿಮ್‌ ಬಳಕೆಯ ಮೂಲಕ ಪಾಕಿಸ್ತಾನದಲ್ಲಿರುವ ತಮ್ಮ ಮುಖ್ಯಸ್ಥರೊಂದಿಗೆ ಸಂಪರ್ಕ ಸಾಧಿಸುತ್ತಿರುವುದು ತನಿಖೆಯಿಂದ ದೃಢಪಟ್ಟಿದೆ. ಇದನ್ನು ಹತ್ತಿಕ್ಕುವ ಪ್ರಯತ್ನದಲ್ಲಿರುವಾಗಲೇ ಹೊಸ ಆ್ಯಪ್‌ಗಳ ಬಳಕೆಯ ಮಾಹಿತಿ ಹೊರಬಿದ್ದಿದೆ. ಇದು ಭದ್ರತಾ ಪಡೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.