ADVERTISEMENT

ವಿಶ್ಲೇಷಣೆ: ಬಿಜೆಪಿಗೆ ಅರ್ಥವಾಗದ ಹಿಮಾಚಲ ಪ್ರದೇಶ

ಕಾಂಗ್ರೆಸ್‌ಗೆ ನೆರವಾದ ಹಳೆಯ ಪಿಂಚಣಿ ಜಾರಿ, ಮಹಿಳೆಯರಿಗೆ ಮಾಶಾಸನ ಭರವಸೆಗಳು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2022, 0:56 IST
Last Updated 9 ಡಿಸೆಂಬರ್ 2022, 0:56 IST
ಚಿತ್ರ
ಚಿತ್ರ   

ಹಿಮಾಚಲದಲ್ಲಿ ಅಧಿಕಾರ ಉಳಿಸಿಕೊಳ್ಳುತ್ತೇವೆ ಎಂದು ಬಿಜೆಪಿ ಭಾರಿ ವಿಶ್ವಾಸ ವ್ಯಕ್ತಪಡಿಸಿತ್ತಾದರೂ, ರಾಜ್ಯದಲ್ಲಿ ಅಧಿಕಾರಕ್ಕೆ ಬರುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಪಕ್ಷದೊಳಗಿನ ಬಿಕ್ಕಟ್ಟಿನ ನಡುವೆಯೂ ಬಿಜೆಪಿಯ ‘ಡಬಲ್ ಎಂಜಿನ್‌ ಸರ್ಕಾರ’ವನ್ನು ತಡೆಯುವಲ್ಲಿ ಕಾಂಗ್ರೆಸ್‌ ಯಶಕಂಡಿದೆ. ಹಲವು ಸಂಗತಿಗಳು ಇದಕ್ಕೆ ಕಾರಣವಾಗಿವೆ.

ರಾಷ್ಟ್ರೀಯ ವಿಚಾರಗಳು ರಾಜ್ಯ ವಿಧಾನಸಭೆ ಚುನಾವಣೆಯ ವಿಷಯವಾಗುವುದಿಲ್ಲ. ಹಿಮಾಚಲ ಪ್ರದೇಶ ಚುನಾವಣೆಯಲ್ಲೂ ಬಿಜೆಪಿ ರಾಷ್ಟ್ರೀಯ ವಿಚಾರಗಳನ್ನೇ ಮುಂದು ಮಾಡಿತು. ಪ್ರಧಾನಿ ನರೇಂದ್ರ ಮೋದಿ, ಅವರ ಪ್ರಭಾವಳಿ, ನಾಯಕತ್ವ ಮತ್ತು ಜನಪ್ರಿಯತೆಯನ್ನು ಬಿಜೆಪಿ ಅತ್ಯಂತ ಸಂಘಟನಾತ್ಮಕವಾಗಿ ಪ್ರಚಾರದಲ್ಲಿ ಬಳಸಿಕೊಂಡಿತು. ರಾಷ್ಟ್ರೀಯ ಭದ್ರತೆ ಬಿಜೆಪಿ ಚುನಾವಣೆಯ ವಿಷಯವಾಗಿತ್ತು. ಜತೆಗೆ ಡಬಲ್ ಎಂಜಿನ್‌ (ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ) ಸರ್ಕಾರವಿದ್ದರೆ ಜನರಿಗೆ ಒಳ್ಳೆಯದು ಎಂಬ ಭಾವನೆ ಮೂಡಿಸಲು ಬಿಜೆಪಿ ಯತ್ನಿಸಿತು.

ಆದರೆ, ಚುನಾವಣೆಯಲ್ಲಿ ಬಿಜೆಪಿ ನೀಡಿದ ಆಶ್ವಾಸನೆಗಳೆಲ್ಲವೂ ಧ್ರುವೀಕರಣದ ಉದ್ದೇಶದ್ದಾಗಿದ್ದವು. ಏಕರೂಪ ನಾಗರಿಕ ಸಂಹಿತೆಯನ್ನು ತರುತ್ತೇವೆ ಎಂದು ಬಿಜೆಪಿ ಹೇಳಿತು. ಈ ಆಶ್ವಾಸನೆ ರಾಜ್ಯದಲ್ಲಿ ಚುನಾವಣೆಯ ವಿಷಯವೇ ಆಗಲಿಲ್ಲ. ಏಕೆಂದರೆ ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನಲ್ಲಿ ಮಸೂದೆ ಹೊರಡಿಸುವ ಮೂಲಕ ಜಾರಿಗೆ ತರಬೇಕು. ರಾಜ್ಯದಲ್ಲಿ ಚುನಾವಣೆ ಗೆಲ್ಲುವ ಮೂಲಕ ಇದನ್ನು ತರಲು ಸಾಧ್ಯವಿಲ್ಲ ಎಂಬುದು ಮೊದಲ ವಿಚಾರ. ಯಾರನ್ನು ಗುರಿ ಮಾಡಿ ಇಂತಹ ಆಶ್ವಾಸನೆ ನೀಡಲಾಗುತ್ತಿದೆ ಎಂಬುದು ಎರಡನೇ ವಿಚಾರ. ಇವುಗಳ ಜತೆಯಲ್ಲಿ ವಕ್ಫ್‌ ಆಸ್ತಿಗಳ ಕುರಿತು ತನಿಖೆ ನಡೆಸಲಾಗುತ್ತದೆ ಎಂದೂ ಬಿಜೆಪಿ ಘೋಷಿಸಿತ್ತು. ಆದರೆ, ಈ ರೀತಿಯ ಧಾರ್ಮಿಕ ಧ್ರುವೀಕರಣ ಮಾಡಲು ಇದು ಉತ್ತರ ಪ್ರದೇಶವಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲು ಬಿಜೆಪಿ ವಿಫಲವಾಗಿದೆ. ಏಕೆಂದರೆ, ಹಿಮಾಚಲ ಪ್ರದೇಶದಲ್ಲಿ ಶೇ 94ರಷ್ಟು ಜನರು ಹಿಂದೂಗಳೇ ಆಗಿದ್ದಾರೆ. ಧ್ರುವೀಕರಣ ನಡೆಸಲು ಬೇರೆ ಸಮುದಾಯಗಳೇ ಇಲ್ಲ. ಹೀಗಾಗಿಯೇ ಬಿಜೆಪಿಯ ಈ ಆಶ್ವಾಸನೆಗಳನ್ನು ಜನರು ತಿರಸ್ಕರಿಸಿದ್ದಾರೆ.

ADVERTISEMENT

ವಿದ್ಯಾರ್ಥಿನಿಯರಿಗೆ ಸೈಕಲ್‌ ಮತ್ತು ಸ್ಕೂಟರ್ ನೀಡುತ್ತೇವೆ ಎಂದು ಹೇಳಿ, ಮಹಿಳೆಯರನ್ನು ಓಲೈಸಲೂ ಬಿಜೆಪಿ ಯತ್ನಿಸಿತು. ರಾಜ್ಯದಲ್ಲಿ ಸಾರಿಗೆ ಸಂಪರ್ಕ ಅಷ್ಟು ಸರಳವಾಗಿಲ್ಲ ಎಂಬುದು ಇಡೀ ರಾಜ್ಯದಲ್ಲಿ ಓಡಾಡಿದರೆ ಅರಿವಾಗುತ್ತದೆ. ಏಕೆಂದರೆ, ರಾಜ್ಯದ ಹಲವು ಶಾಲೆಗಳಿಗೆ ರಸ್ತೆಯೇ ಇಲ್ಲ. ಹೀಗಿದ್ದಾಗ ಸೈಕಲ್‌ ಸವಾರಿ ಮಾಡುವುದಾದರೂ ಹೇಗೆ? ಇರುವ 12ರಲ್ಲಿ ಎಷ್ಟು ಜಿಲ್ಲೆಗಳಲ್ಲಿ ಈ ಆಶ್ವಾಸನೆ ಉಪಯೋಗಕ್ಕೆ ಬರಲಿದೆ?

ಇನ್ನೊಂದೆಡೆ ಕಾಂಗ್ರೆಸ್‌ ಹಳೆ ಪಿಂಚಣಿವ್ಯವಸ್ಥೆಯನ್ನು ವಾಪಸ್‌ ತರುವ ಆಶ್ವಾಸನೆ ನೀಡಿತು. ಇದು ಚುನಾವಣೆಗೆ ತಿರುವು ನೀಡಿದ ಘೋಷಣೆ. 18–60 ವರ್ಷದ ಮಹಿಳೆಯರಿಗೆ ತಿಂಗಳಿಗೆ ₹1500 ಮಾಸಾಶನ ನೀಡುತ್ತೇವೆ ಎಂದು ಹೇಳುವ ಮೂಲಕ, ರಾಜ್ಯದ ಮಹಿಳೆಯರನ್ನು ಕಾಂಗ್ರೆಸ್‌ ಓಲೈಸಿತು. ಇದು ಕಾರ್ಯಸಾಧುವೇ ಅಥವಾ ಇಲ್ಲವೇ ಎಂಬುದು ನಂತರದ ವಿಚಾರ. ಆದರೆ, ಬೆಲೆ ಏರಿಕೆಯಿಂದ ಬಸವಳಿದಿರುವ ಮಹಿಳೆಯರನ್ನು ತಲುಪುವಲ್ಲಿ ಈ ಘೋಷಣೆ ನೆರವಾಗಿದ್ದಂತೂ ಹೌದು. ಸೇಬಿನ ಕಾರ್ಟನ್‌ಗಳ ಮೇಲೆ ವಿಧಿಸಲಾಗಿರುವ ಜಿಎಸ್‌ಟಿಯನ್ನು ರದ್ದು ಪಡಿಸುವುದಾಗಿ ಕಾಂಗ್ರೆಸ್‌ ಹೇಳಿತು. ರಾಜ್ಯದ 15–20 ಕ್ಷೇತ್ರಗಳಲ್ಲಾದರೂ ಇದು ಸೇಬು ಬೆಳೆಗಾರರನ್ನು ಪ್ರಭಾವಿಸಿದೆ. 300 ಯೂನಿಟ್‌ವರೆಗೆ ಉಚಿತ ವಿದ್ಯುತ್, ಐದು ಲಕ್ಷ ಉದ್ಯೋಗ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಅಗ್ನಿವೀರ ಯೋಜನೆ ರದ್ದುಪಡಿಸುತ್ತೇವೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಘೋಷಿಸಿದ್ದು ಮತದಾರರನ್ನುಪ್ರಭಾವಿಸಿದೆ.

ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲು ಯಾವುದೇ ಜನಪ್ರಿಯ ನಾಯಕರು ಕಾಂಗ್ರೆಸ್‌ನಲ್ಲಿ ಇರಲಿಲ್ಲ. ವೀರಭದ್ರ ಸಿಂಗ್ ಅವರ ನಿಧನಾನಂತರ ಪಕ್ಷವನ್ನು ಮುನ್ನಡೆಸುವುದು ಯಾರು ಎಂಬ ಪ್ರಶ್ನೆ ಎದುರಾಗಿತ್ತು. ಇದು ದೊಡ್ಡ ಬಿಕ್ಕಟ್ಟಿನಂತಾಗುವ ಮೊದಲೇ, ವೀರಭದ್ರ ಅವರ ಪತ್ನಿ ಪ್ರತಿಭಾ ಸಿಂಗ್‌ ಅವರಿಗೆ ಪಕ್ಷದ ಮುಂದಾಳತ್ವ ನೀಡಲಾಯಿತು. ಬಣ ರಾಜಕಾರಣವಿದ್ದರೂ, ಪಕ್ಷದ ಈ ನಿರ್ಧಾರವು ಸಂಭಾವ್ಯ ಬಿಕ್ಕಟ್ಟನ್ನು ತಡೆಯಿತು. ಅಭ್ಯರ್ಥಿಗಳ ಆಯ್ಕೆಯು, ಭಿನ್ನಾಭಿಪ್ರಾಯವನ್ನು ತಣ್ಣಗಾಗಿಸಿತು.

ಲೇಖಕ: ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.