ADVERTISEMENT

ಹಿಮಾಚಲದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಮೋದಿ ಕರೆಗೂ ಬಗ್ಗದ ಅಭ್ಯರ್ಥಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ನವೆಂಬರ್ 2022, 10:51 IST
Last Updated 9 ನವೆಂಬರ್ 2022, 10:51 IST
   

ಶಿಮ್ಲಾ: ದಿನದಿಂದ ದಿನಕ್ಕೆ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆ ಕಣ ರಂಗೇರುತ್ತಿದ್ದು, ಆಡಳಿತಾರೂಢ ಬಿಜೆಪಿಗೆ ಬಂಡಾಯ ಅಭ್ಯರ್ಥಿಗಳದ್ದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಬಿಜೆಪಿಯ ಮಾಜಿ ಸಂಸದ ಕೃಪಾಲ್‌ ಪಾರ್ಮರ್‌ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದು, ಪ್ರಧಾನಿ ಮೋದಿ ಅವರ ಮನವೊಲಿಕೆಯ ನಂತರವೂ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ಕೃಪಾಲ್‌ ಮತ್ತು ಮೋದಿ ನಡುವಣ ಸಂಭಾಷಣೆ ಎನ್ನಲಾಗಿರುವ ಆಡಿಯೊ ತುಣುಕೊಂದು ಎಲ್ಲೆಡೆ ಹರಿದಾಡುತ್ತಿದೆ. ಪ್ರಧಾನಿ ಮೋದಿ ಕರೆ ಮಾಡಿ ಕೃಪಾಲ್‌ ಅವರನ್ನು ಕಣದಿಂದ ಹಿಂದೆ ಸರಿಯುವಂತೆ ಮನವೊಲಿಸಲು ಯತ್ನಿಸಿದ್ದಾರೆ. ಫತೇಪುರ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ ಎಂದು ವರದಿ ತಿಳಿಸಿದೆ.

ಕಳೆದ ವರ್ಷ ನಡೆದ ಉಪ ಚುನಾವಣೆಯಲ್ಲಿಯೂ 63 ವರ್ಷದ ಹಿರಿಯ ಮುಖಂಡ ಕೃಪಾಲ್‌ ಅವರನ್ನು ಪಕ್ಷ ಕಡೆಗಣಿಸಿತ್ತು. ಇದರಿಂದ ಬೇಸತ್ತ ಅವರು ಬಂಡಾಯವೆದ್ದಿದ್ದಾರೆ.

ADVERTISEMENT

ತಮ್ಮ ಸಹಪಾಠಿಯಾಗಿರುವ ಜೆ.ಪಿ.ನಡ್ಡಾ ತಮ್ಮನ್ನು ಪಕ್ಷದಲ್ಲಿ ಕಡೆಗಣಿಸಿದ್ದಾರೆ ಎಂದು ಕೃಪಾಲ್‌ ಆರೋಪಿಸಿದ್ದಾರೆ. ಕೃಪಾಲ್ ಅವರಿಗೆ ಮೋದಿ ಕರೆ ಮಾಡಿರುವುದಾಗಿ ಕೃಪಾಲ್‌ ಹೇಳುತ್ತಿದ್ದರು, ಪ್ರಧಾನಿ ಕಚೇರಿಯಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

ಮೋದಿ ಹಿಮಾಚಲದ ಉಸ್ತುವಾರಿಯಾಗಿದ್ದಾಗ ಪಾರ್ಮರ್‌ ಪಕ್ಷದ ಉಪಾಧ್ಯಕ್ಷರಾಗಿದ್ದರು. ಹೀಗಾಗಿ ಇಬ್ಬರ ಒಡನಾಟ ಉತ್ತಮವಾಗಿದೆ. ನಾವು ಉತ್ತಮ ಸ್ನೇಹಿತರೂ ಕೂಡ ಎಂದು ಪಾರ್ಮರ್‌ ಎನ್‌ಡಿಟಿವಿಗೆ ಹೇಳಿದ್ದಾರೆ.

ಈ ಚುನಾವಣೆಯಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ಜೋರಾಗಿದೆ. 11 ಹಾಲಿ ಶಾಸಕರಿಗೆ ಪಕ್ಷ ಟಿಕೆಟ್‌ ನಿರಾಕರಿಸಿತ್ತು. ಒಟ್ಟು 20 ಕ್ಷೇತ್ರಗಳಲ್ಲಿ ಪ್ರಮುಖ ಮುಖಂಡರೇ ಪಕ್ಷದ ವಿರುದ್ದ ಬಂಡಾಯ ಸಾರಿದ್ದಾರೆ ಎಂದು ವರದಿಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.