ನವದೆಹಲಿ: ನೀಟ್–ಯುಜಿ ಅಂತಿಮ ಫಲಿತಾಂಶಗಳನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಎರಡು ದಿನಗಳಲ್ಲಿ ಪ್ರಕಟಿಸಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ತಿಳಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮೆರಿಟ್ ಪಟ್ಟಿಯನ್ನು ಪರಿಷ್ಕರಿಸಬಹುದು ಎಂದು ಹೇಳಿದರು.
ನೀಟ್– ಯುಜಿ ಪರೀಕ್ಷೆಗಳನ್ನು ರದ್ದುಗೊಳಿಸಲು ಕೋರಿದ ಅರ್ಜಿಗಳನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ ಪ್ರಧಾನ್, ಕೊನೆಗೂ ಸತ್ಯಕ್ಕೆ ಗೆಲುವು ಸಂದಿದೆ (ಸತ್ಯ ವಿಜಯ್ ಹುವಾ ಹೈ) ಎಂದು ಹೇಳಿದರು.
‘ಸುಪ್ರೀಂ ಕೋರ್ಟ್ ಮುಂದೆ ನಮ್ಮ ಪರ ವಾದ ಮಂಡಿಸುವಾಗ, ಮೋದಿ ಸರ್ಕಾರವು ಅಕ್ರಮವಿಲ್ಲದ ಮತ್ತು ದೋಷರಹಿತ ಹಾಗೂ ಪಾರದರ್ಶಕ ಪರೀಕ್ಷೆಯ ವ್ಯವಸ್ಥೆಗೆ ಬದ್ಧವಾಗಿದೆ ಎಂದು ಹೇಳಿದ್ದೇವೆ. ಈ ನಿಟ್ಟಿನಲ್ಲಿ, ನಾವು ಎನ್‌ಟಿಎಯನ್ನು ಪರಿಷ್ಕರಣೆ ಮಾಡಲು ನಾವು ಕೆಲವು ದಿನಗಳ ಹಿಂದೆ ತಜ್ಞರ ಸಮಿತಿಯನ್ನು ನೇಮಕ ಮಾಡಿದ್ದೇವೆ’ ಎಂದು ಅವರು ಹೇಳಿದರು.
‘ಸಮಾಜದ ದುರ್ಬಲ ವರ್ಗಗಳ ಮೇಲೆ ನೀಟ್ ರದ್ದತಿಯು ಪರಿಣಾಮ ಬೀರುತ್ತದೆ ಎನ್ನುವುದನ್ನು ಸುಪ್ರೀಂ ಕೋರ್ಟ್ ಪರಿಗಣಿಸಿದೆ. ಪರೀಕ್ಷೆ ರದ್ದಾಗಿದ್ದರೆ ಎಸ್‌ಸಿ, ಎಸ್‌ಟಿ, ಒಬಿಸಿ, ಆರ್ಥಿಕವಾಗಿ ದುರ್ಬಲ ವರ್ಗಗಳ ಮೇಲೆ ಪರಿಣಾಮ ಬೀರುತ್ತಿತ್ತು. ಈ ಬಗ್ಗೆ ನಾವು ಮೊದಲು ಧ್ವನಿ ಎದತ್ತಿದ್ದೆವು’ ಎಂದು ಅವರು ಹೇಳಿದರು.
‘ಪರೀಕ್ಷೆಯ ಅಕ್ರಮಗಳಲ್ಲಿ ಯಾರೇ ಭಾಗಿಯಾಗಿರುವುದು ಕಂಡುಬಂದರೆ, ಅವರನ್ನು ಸುಮ್ಮನೆ ಬಿಡುವುದಿಲ್ಲ. ಪರೀಕ್ಷೆಗಳ ಪಾರದರ್ಶಕತೆಯಲ್ಲಿ ಯಾವುದೇ ರೀತಿಯ ಉಲ್ಲಂಘನೆಯನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ಪರೀಕ್ಷೆಗಳ ಪಾವಿತ್ರ್ಯತೆ ನಮಗೆ ಅತ್ಯುನ್ನತವಾಗಿದೆ’ ಎಂದು ಪ್ರಧಾನ್ ಹೇಳಿದ್ದಾರೆ.
‘ನೀಟ್ ವಿವಾದದ ನಂತರ ಪ್ರತಿಪಕ್ಷಗಳ ಬಣ್ಣ ಬಯಲಾಗಿದೆ. ವಿಶೇಷವಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ, ದೇಶದ ಶಿಕ್ಷಣ ವ್ಯವಸ್ಥೆಯು ಅಧ್ವಾನವಾಗಿದೆ ಎಂದು ಹೇಳಿರುವುದು ಅವರ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ. ದೇಶದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಜಾಗತಿಕವಾಗಿ ಪ್ರಶಂಸಿಸಲಾಗಿದೆ. ನಮ್ಮ ವೈದ್ಯರು ಮತ್ತು ಎಂಜಿನಿಯರ್‌ಗಳು ವಿಶ್ವದಾದ್ಯಂತ ಉತ್ತಮರೆಂದು ಪರಿಗಣಿಸಲ್ಪಟ್ಟಿದ್ದಾರೆ. ಇದನ್ನೆಲ್ಲ ಟೀಕಿಸುವ ರಾಹುಲ್ ಗಾಂಧಿ ಇಡೀ ದೇಶವನ್ನು ಟೀಕಿಸುತ್ತಿದ್ದಾರೆ. ಅವರು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುತ್ತಿದ್ದಾರೆ ಮತ್ತು ಅರಾಜಕತೆಯನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಧಾನ್ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.