ADVERTISEMENT

ರಾಜಸ್ಥಾನ ವಿಧಾನಸಭೆ ಸ್ಪೀಕರ್‌ಗೆ ಹೈಕೋರ್ಟ್‌ ನೋಟಿಸ್‌

ಬಿಎಸ್‌ಪಿ ಶಾಸಕರನ್ನು ಕಾಂಗ್ರೆಸ್‌ ಪಕ್ಷದಲ್ಲಿ ವಿಲೀನಗೊಳಿಸಿದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 10:44 IST
Last Updated 5 ಆಗಸ್ಟ್ 2020, 10:44 IST
ವಿಧಾನಸಭೆ ಸ್ಪೀಕರ್‌ ಸಿ.ಪಿ ಜೋಶಿ
ವಿಧಾನಸಭೆ ಸ್ಪೀಕರ್‌ ಸಿ.ಪಿ ಜೋಶಿ    

ಜೈಪುರ: ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ಆರು ಶಾಸಕರನ್ನು ಕಾಂಗ್ರೆಸ್‌ ಪಕ್ಷದೊಂದಿಗೆ ವಿಲೀನಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ವಿಧಾನಸಭಾಧ್ಯಕ್ಷ ಸಿ.ಪಿ.ಜೋಶಿಯವರಿಗೆ ಹೈ ಕೋರ್ಟ್‌ ಬುಧವಾರ ನೋಟಿಸ್‌ ಜಾರಿ ಮಾಡಿದೆ.

ಬಿಎಸ್‌ಪಿ ಶಾಸಕರನ್ನು ಕಾಂಗ್ರೆಸ್‌ ಪಕ್ಷದೊಂದಿಗೆ ವಿಲೀನಗೊಳಿಸಿರುವುದರ ವಿರುದ್ಧ ಬಿಜೆಪಿ ನಾಯಕ ಮದನ್ ದಿಲಾವರ್‌ ಮತ್ತು ಬಿಎಸ್‌ಪಿಯ ರಾಷ್ಟ್ರೀಯ ಕಾರ್ಯದರ್ಶಿ ಸತೀಶ್‌ ಮಿಶ್ರಾ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಜೋಶಿಯವರಿಗೆ ನೋಟಿಸ್ ನೀಡಿತು. ಗುರುವಾರದೊಳಗೆ ನೋಟಿಸ್‌ಗೆ ಉತ್ತರಿಸಲು ಹೈಕೋರ್ಟ್‌ ಸೂಚಿಸಿದೆ. ಗುರುವಾರ 10.30ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ.

ಹಿನ್ನೆಲೆ:ಸಂದೀಪ್ ಯಾದವ್, ವಾಜಿಬ್ ಅಲಿ, ದೀಪ್‌ಚಂದ್‌ ಖೇರಿಯಾ, ಲಖನ್ ಮೀನಾ, ಜೋಗೇಂದ್ರ ಅವನಾ ಮತ್ತು ರಾಜೇಂದ್ರ ಗುಧಾ ಎಂಬ ಆರು ಮಂದಿ ಶಾಸಕರಿಗೆ ಸದ್ಯ ಬಿಎಸ್‌ಪಿ ವಿಪ್‌ ಜಾರಿ ಮಾಡಿದೆ. 2018ರಲ್ಲಿ ನಡೆದಿದ್ದ ರಾಜಸ್ಥಾನ ವಿಧಾನಸಭೆ ಚುನಾಣೆಯಲ್ಲಿ ಇವರೆಲ್ಲರೂ ಬಿಎಸ್‌ಪಿಯಿಂದ ಆಯ್ಕೆಯಾಗಿದ್ದರು.

ADVERTISEMENT

ಆದರೆ, ಆರೂ ಜನರೂ ಕಾಂಗ್ರೆಸ್‌ ಸೇರುವ ಇಂಗಿತ ವ್ಯಕ್ತಪಡಿಸಿ ಕಳೆದ ವರ್ಷ ಸೆಪ್ಟೆಂಬರ್‌ 16ರಂದು ಸ್ಪೀಕರ್‌ಗೆ ವಿಲೀನ ಅರ್ಜಿ ಸಲ್ಲಿಸಿದ್ದರು. ಎರಡು ದಿನಗಳ ನಂತರ ಆದೇಶ ಹೊರಡಿಸಿದ್ದ ಸ್ಪೀಕರ್‌ ಆರು ಮಂದಿಯೂ ಇನ್ನು ಮುಂದೆ ಕಾಂಗ್ರೆಸ್‌ನ ಶಾಸಕರು ಎಂದು ಘೋಷಿಸಿದ್ದರು. ಹೀಗಾಗಿ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಬಲ 107ಕ್ಕೆ ಏರಿತ್ತು. ಆರೂ ಶಾಸಕರೂ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.

ಬಿಎಸ್‌ಪಿಯ ಆರು ಮಂದಿ ಶಾಸಕರನ್ನು ಕಾಂಗ್ರೆಸ್‌ನಲ್ಲಿ ವಿಲೀನ ಮಾಡಿರುವ ಪ್ರಕ್ರಿಯೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಶಾಸಕ ಮದನ್‌ ದಿಲಾವರ್ ಮತ್ತು ಬಿಎಸ್‌ಪಿ ರಾಜಸ್ಥಾನ ಹೈಕೋರ್ಟ್‌ನಲ್ಲಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.