ADVERTISEMENT

ಕರುಳಿನ ಉರಿಯೂತದ ಔಷಧ ಪಡೆದರೆ ಲಸಿಕೆ ಪರಿಣಾಮ ಅಲ್ಪ: ಅಧ್ಯಯನ

ಪಿಟಿಐ
Published 27 ಏಪ್ರಿಲ್ 2021, 21:54 IST
Last Updated 27 ಏಪ್ರಿಲ್ 2021, 21:54 IST
.
.   

ನವದೆಹಲಿ: ‘ಕರುಳಿನ ಉರಿಯೂತಕ್ಕೆ ವೈದ್ಯರು ಸಾಮಾನ್ಯವಾಗಿ ನೀಡುವ ಔಷಧಗಳು, ಕೋವಿಡ್‌-19 ಲಸಿಕೆಯ ಮೊದಲನೇ ಡೋಸ್‌ನ ಪರಿಣಾಮವನ್ನು ಕುಗ್ಗಿಸುತ್ತದೆ’ ಎಂದು ಅಧ್ಯಯನ ವರದಿ ಹೇಳಿದೆ.

ಆಸ್ಟ್ರಾಜೆನೆಕಾ ಕಂಪನಿಯ ಕೋವಿಶೀಲ್ಡ್ ಮತ್ತು ಫೈಝರ್ ಕಂಪನಿಯ ಕೋವಿಡ್‌ ಲಸಿಕೆಯನ್ನು ಪಡೆದುಕೊಂಡಿದ್ದ 865 ಜನರ ಮೇಲೆ ಬ್ರಿಟನ್‌ನ ಎಕ್ಸ್‌ಟೆರ್‌ ವಿಶ್ವವಿದ್ಯಾಲಯವು ಅಧ್ಯಯನ ನಡೆಸಿದೆ. ಕರುಳಿನ ಉರಿಯೂತಕ್ಕೆ ಸಾಮಾನ್ಯವಾಗಿ ನೀಡುವ ‘ಇನ್ಫ್ಲಿಕ್ಸಿಮ್ಯಾಬ್’ ಔಷಧ ತೆಗೆದುಕೊಳ್ಳುತ್ತಿರುವವರನ್ನು ಈ ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು.

‘ಇನ್ಫ್ಲಿಕ್ಸಿಮ್ಯಾಬ್ ಔಷಧ ತೆಗದುಕೊಳ್ಳುತ್ತಿದ್ದು, ಈ ಎರಡರಲ್ಲಿ ಯಾವುದಾದರೂ ಒಂದು ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡವರಲ್ಲಿ ಕೋವಿಡ್‌ ಪ್ರತಿರೋಧಕ ಶಕ್ತಿ ಕಡಿಮೆ ಪ್ರಮಾಣದಲ್ಲಿ ಇತ್ತು. ಈ ಔಷಧ ಸೇವಿಸುತ್ತಿರುವವರು ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಪಡೆದುಕೊಂಡರೂ, ಗಣನೀಯ ಪ್ರಮಾಣದಲ್ಲಿ ಪ್ರತಿರೋಧಕ ಶಕ್ತಿ ಉಂಟಾಗಿಲ್ಲ ಎಂಬುದು ಪತ್ತೆಯಾಯಿತು’ ಎಂದು ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ.

ADVERTISEMENT

‘ಈ ಔಷಧವನ್ನು ಸ್ವಲ್ಪ ಕಾಲದಿಂದ ತೆಗೆದುಕೊಳ್ಳುತ್ತಿರುವ 328 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇವರಲ್ಲಿ ಎಲ್ಲರಿಗೂ ಕೋವಿಡ್‌ ಲಸಿಕೆಯ ಮೊದಲ ಡೋಸ್ ನೀಡಿದ್ದರೂ, 103 ಜನರಲ್ಲಿ ಮಾತ್ರ ಕೋವಿಡ್‌ ಪ್ರತಿಕಾಯ ಸ್ವಲ್ಪ ಪ್ರಮಾಣದಲ್ಲಿ ಅಭಿವೃದ್ಧಿಯಾಗಿತ್ತು. ಇದೇ ಔಷಧವನ್ನು ದೀರ್ಘಕಾಲದಿಂದ ಸೇವಿಸುತ್ತಿದ್ದ 537 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಕೋವಿಡ್‌ ಲಸಿಕೆಯ ಮೊದಲ ಡೋಸ್ ಪಡೆದುಕೊಂಡರೂ, ಇವರಲ್ಲಿ ಕೇವಲ 127 ಜನರಲ್ಲಿ ಕೋವಿಡ್‌ ಪ್ರತಿಕಾಯ ಅಭಿವೃದ್ಧಿಯಾಗಿತ್ತು’ ಎಂದು ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ.

‘ಈಗಾಗಲೇ ಕೋವಿಡ್‌ ತಗುಲಿದ್ದ, ಲಸಿಕೆಯ ಎರಡೂ ಡೋಸ್ ಪಡೆದುಕೊಂಡಿರುವವರನ್ನೂ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇವರು ಇನ್ಫ್ಲಿಕ್ಸಿಮ್ಯಾಬ್ ಔಷಧ ಪಡೆದುಕೊಂಡಿದ್ದರೂ ಕೋವಿಡ್‌ ಪ್ರತಿಕಾಯ ಗಣನೀಯವಾಗಿ ಏರಿಕೆಯಾಗಿರುವುದು ಪತ್ತೆಯಾಗಿತ್ತು. ಹೀಗಾಗಿ ಇನ್ಫ್ಲಿಕ್ಸಿಮ್ಯಾಬ್ ಔಷಧ ತೆಗೆದುಕೊಂಡವರು ಕೋವಿಡ್‌ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದರೂ, ಕೋವಿಡ್‌ ತಗಲುವ ಅಪಾಯ ಇದ್ದೇ ಇರುತ್ತದೆ. ಹೀಗಾಗಿ ಲಸಿಕೆಯ ಎರಡನೇ ಡೋಸ್‌ ಹಾಕಿಸಿಕೊಳ್ಳಲು ಆದ್ಯತೆ ನೀಡಬೇಕು’ ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.