ADVERTISEMENT

ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಹಾರಿ ಕಾರ್ಮಿಕರಿಗೆ ಭೀತಿ ಹೆಚ್ಚಿಸಿದ ಉಗ್ರರ ದಾಳಿ

ಕಾಶ್ಮೀರ: ನಾಗರಿಕ ಮೇಲೆ ಹೆಚ್ಚಿದ ದಾಳಿ * ಹುಟ್ಟೂರಿನತ್ತ ಮುಖ ಮಾಡಿದ ಕಾರ್ಮಿಕರು

ಪಿಟಿಐ
Published 19 ಅಕ್ಟೋಬರ್ 2021, 9:55 IST
Last Updated 19 ಅಕ್ಟೋಬರ್ 2021, 9:55 IST
ಹುಟ್ಟೂರಿಗೆ ತೆರಳಲು ಜಮ್ಮುವಿನ ರೈಲು ನಿಲ್ದಾಣದಲ್ಲಿ ರೈಲಿನ ನಿರೀಕ್ಷೆಯಲ್ಲಿರುವ ವಲಸೆ ಕಾರ್ಮಿಕರು
ಹುಟ್ಟೂರಿಗೆ ತೆರಳಲು ಜಮ್ಮುವಿನ ರೈಲು ನಿಲ್ದಾಣದಲ್ಲಿ ರೈಲಿನ ನಿರೀಕ್ಷೆಯಲ್ಲಿರುವ ವಲಸೆ ಕಾರ್ಮಿಕರು   

ಶ್ರೀನಗರ: ಕಣಿವೆ ರಾಜ್ಯದಲ್ಲೀಗ ಚಳಿಯ ವಾತಾವರಣ. ಬಯಲಿನ ಸ್ಥಿತಿ ಚಳಿಯನ್ನು ಹೆಚ್ಚಿಸಿತ್ತು. ರೈಲ್ವೆನಿಲ್ದಾಣದಲ್ಲಿ ರೈಲಿನ ನಿರೀಕ್ಷೆಯಲ್ಲಿದ್ದ ವಲಸೆ ಕಾರ್ಮಿಕರು ಕಾಶ್ಮೀರದಿಂದ ತೆರಳುವ ಆತುರದಲ್ಲಿದ್ದರು. ಚಳಿಯಲ್ಲೂ ಅವರಿಗೆ ಭಯ. ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಹಾಜರಿ ಸ್ವಲ್ಪ ಮಟ್ಟಿಗೆ ನೆಮ್ಮದಿ ನೀಡಿತ್ತು.

ಅಲ್ಪಸಂಖ್ಯಾತರು, ಸ್ಥಳೀಯರಲ್ಲದವರು, ಇತರೆ ನಾಗರಿಕರನ್ನು ಗುರಿಯಾಗಿಸಿ ಉಗ್ರರು ನಡೆಸುತ್ತಿರುವ ಹತ್ಯೆ ಪ್ರಕರಣಗಳು ಸಹಜವಾಗಿ ಭೀತಿಯ ವಾತಾವರಣ ಹೆಚ್ಚಿಸಿತ್ತು. ಸುಮಾರು 50 ಕಾರ್ಮಿಕರು, ಬಹುತೇಕರು ಬಿಹಾರದಿಂದ ಬಂದವರು ಸೋಮವಾರ ರಾತ್ರಿ ನೌಗಂ ನಿಲ್ದಾಣದಲ್ಲಿ ಸೇರಿದ್ದರು.

ಚಳಿಯಿದ್ದರೂ ನಾವು ಬಯಲಿನ ವಾತಾವರಣದಲ್ಲಿಯೇ ಇಡೀ ರಾತ್ರಿಯನ್ನು ಕಳೆದವು. ಆದರೆ, ನಿಲ್ದಾಣದ ರಕ್ಷಣೆಗೆ ಭದ್ರತಾ ಸಿಬ್ಬಂದಿ ಇದ್ದುದು ನಮಗೂ ಭದ್ರತೆಯ ಭಾವನೆ ನೀಡಿತ್ತು’ ಎಂದು ಬಿಹಾರ ಮೂಲದ ವಲಸೆ ಕಾರ್ಮಿಕ ಮಿಥಿಲೇಶ್ ಕುಮಾರ್‌ ಹೇಳಿದರು.

ADVERTISEMENT

‘ನಾವು ನಿರೀಕ್ಷೆಗೂ ಮೀರಿ ಮೊದಲೇ ಕಾಶ್ಮೀರದಿಂದ ತೆರಳುತ್ತಿದ್ದೇವೆ. ಅದು ಭಯದಿಂದ’ ಎಂದು ಹೇಳಿದರು. ಪ್ರಯಾಣದ ಅವಧಿಯಲ್ಲಿ ರಕ್ಷಣೆಯ ಭರವಸೆ ಇರುವುದರಿಂದ ರೈಲು ಪ್ರಯಾಣವೇ ಸುರಕ್ಷಿತ ಎಂದು ಹೇಳಿದರು.

ಇಲ್ಲಿನ ಬನಿಹಾಲ್‌ಗೆ ರೈಲಿನಲ್ಲಿ ಹೋಗಲಿದ್ದು, ಅಲ್ಲಿಂದ ಜಮ್ಮುವಿಗೆ ಟ್ಯಾಕ್ಸಿ ಅಥವಾ ಬಸ್ಸಿನಲ್ಲಿ ತೆರಳುತ್ತೇವೆ. ತದನಂತರ ನಮ್ಮ ಪ್ರಯಾಣ ಬಿಹಾರಕ್ಕೆ ಸಾಗಲಿದೆ. ನಮಗೆ ಯಾರೂ ಕಾಶ್ಮೀರದಿಂದ ಹೋಗಲು ಹೇಳಿಲ್ಲ. ಆದರೆ, ಏನಾದರೂ ಆದರೆ ಯಾರು ಹೊಣೆ’ ಎಂದು ದೀಪಕ್‌ ಕುಮಾರ್ ಪ್ರಶ್ನಿಸಿದರು.

ಬಿಹಾರದ ಇಬ್ಬರು ಕಾರ್ಮಿಕರು ಭಾನುವಾರ ಉಗ್ರರ ಗುಂಡಿಗೆ ಬಲಿಯಾಗಿದ್ದರು. ಕುಲ್ಗಾಂ ಜಿಲ್ಲೆಯಲ್ಲಿ ನಡೆದಿದ್ದ ಈ ಕೃತ್ಯದ ನಂತರ ಕಣಿವೆ ರಾಜ್ಯದಲ್ಲಿ ಈ ತಿಂಗಳು ಉಗ್ರರ ಗುಂಡಿಗೆ ಬಲಿಯಾದ ನಾಗರಿಕರ ಸಂಖ್ಯೆ 11ಕ್ಕೆ ಏರಿತ್ತು.

ವಲಸೆ ಕಾರ್ಮಿಕರನ್ನು ಉಗ್ರರು ಗುರಿಯಾಗಿಸಿಕೊಂಡಿರುವುದು ಅನೇಕ ಕಾರ್ಮಿಕರಲ್ಲಿ ತಳಮಳ ಮೂಡಿಸಿದೆ. ಅವರೆಲ್ಲರೂ ಹುಟ್ಟೂರಿಗೆ ಮರಳಲು ಸಿದ್ಧತೆ ನಡೆಸಿದ್ದಾರೆ. ಆದರೆ, ಹೆಚ್ಚಿನವರು ಸ್ಥಳೀಯ ನಿವಾಸಿಗಳು ಚೆನ್ನಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಹೇಳುತ್ತಾರೆ.

ಸ್ಥಳೀಯ ಜನರು ಚೆನ್ನಾಗಿದ್ದಾರೆ. ಕೆಲ ಮುಖಂಡರು ರಾಜಕಾರಣ ಮಾಡುತ್ತಾರೆ. ಅದರ ಪರಿಣಾಮವನ್ನು ಸಮೂಹ ಎದುರಿಸಬೇಕಾಗಿದೆ ಎಂದು ದೀಪಕ್‌ ಕುಮಾರ್‌ ಅಭಿಪ್ರಾಯಪಟ್ಟರು. ವಲಸೆ ಕಾರ್ಮಿಕರೇ ಅಧಿಕ ಸಂಖ್ಯೆಯಲ್ಲಿದ್ದ ಹವಾಲ್‌ ಚೌಕ್‌ನಲ್ಲಿ ಈಗ ಕಾರ್ಮಿಕರ ಸಂಖ್ಯೆ ಕ್ಷೀಣಿಸುತ್ತಿದೆ. ಹವಾಲ್‌ ಚೌಕ್‌ನಲ್ಲಿಯೇ ಮೊದಲ ಬಾರಿಗೆ ವಲಸೆ ಕಾರ್ಮಿಕ ವೀರೇಂದ್ರ ಪಾಸ್ವಾನ್‌ ಗುಂಡಿಗೆ ಬಲಿಯಾಗಿದ್ದ. ಇದು, ಕಾಶ್ಮೀರಿ ಪಂಡಿತ್ ಮಖಣ್ ಲಾಲ್‌ ಬಿಂದ್ರೂ ಹತ್ಯೆಯಾಗಿದ್ದ ಸ್ಥಳಕ್ಕೆ ಒಂದು ಕಿ.ಮೀ. ದೂರದಲ್ಲಿದೆ. ಕಣಿವೆ ರಾಜ್ಯಕ್ಕೆ ಸಾಮಾನ್ಯವಾಗಿ ಮಾರ್ಚ್ ಆರಂಭದಲ್ಲಿ ಲಕ್ಷಾಂತರ ಕಾರ್ಮಿಕರು ಉದ್ಯೋಗ ಅರಸಿ ಬರುತ್ತಾರೆ.

ಈ ಮಧ್ಯೆ ಸೋಮವಾರ ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರು ಬಿಹಾರದ ವಲಸೆ ಕಾರ್ಮಿಕರನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸುತ್ತಿರುವುದನ್ನು ಖಂಡಿಸಿದ್ದರು. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್ ಮನೋಜ್‌ ಸಿನ್ಹಾ ಅವರು, ಬಿಹಾರ ಸೇರಿದಂತೆ ವಿವಿಧ ರಾಜ್ಯಗಳ ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರದ ಆಡಳಿತದ ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.