ADVERTISEMENT

ಇಂಟರ್‌ನೆಟ್‌ ಮೂಲಕ ನೆರವು ಯಾಚನೆಗೆ ನಿರ್ಬಂಧ ಬೇಡ: ಸುಪ್ರೀಂ

ಪಿಟಿಐ
Published 30 ಏಪ್ರಿಲ್ 2021, 11:01 IST
Last Updated 30 ಏಪ್ರಿಲ್ 2021, 11:01 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: ಸಾಮಾಜಿಕ ಮಾಧ್ಯಮಗಳೂ ಸೇರಿದಂತೆ ಇಂಟರ್‌ನೆಟ್‌ ಆಧಾರಿತ ವೇದಿಕೆಗಳ ಮೂಲಕ ಕೋವಿಡ್‌–19ಗೆ ಸಂಬಂಧಿಸಿ ಜನರು ನೆರವು ಕೇಳುವುದನ್ನು ನಿರ್ಬಂಧಿಸಬಾರದು ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ಹೇಳಿದೆ.

ಜಾಲತಾಣಗಳ ಮೂಲಕ ಜನರು ಸುಳ್ಳು ದೂರುಗಳನ್ನು ದಾಖಲಿಸುತ್ತಾರೆ, ಅಗತ್ಯವಿಲ್ಲದಿದ್ದರೂ ನೆರವು ಯಾಚಿಸುತ್ತಾರೆ ಎಂದು ಭಾವಿಸಿ, ನೆರವು ನಿರಾಕರಿಸಬಾರದು ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠ ಹೇಳಿತು.

ನ್ಯಾಯಮೂರ್ತಿಗಳಾದ ಎಲ್‌.ನಾಗೇಶ್ವರರಾವ್‌ ಹಾಗೂ ಎಸ್‌.ರವೀಂದ್ರ ಭಟ್‌ ಅವರೂ ಈ ಪೀಠದಲ್ಲಿದ್ದಾರೆ.

ADVERTISEMENT

‘ಯಾವುದೇ ರೀತಿಯ ಅಡೆತಡೆ ಇಲ್ಲದೆಯೇ ಮಾಹಿತಿಯ ಪ್ರಸಾರಕ್ಕೆ ಅವಕಾಶ ಇರಬೇಕು. ಜನರ ಅಹವಾಲುಗಳನ್ನು ನಾವು ಕೇಳಬೇಕು’ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ‘ಆಮ್ಲಜನಕ, ಹಾಸಿಗೆ ಕೊರತೆ ಬಗ್ಗೆ, ವೈದ್ಯರು ಸಿಗದಿರುವ ಬಗ್ಗೆ ಜನರು ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದಾಗ, ವದಂತಿ ಹಬ್ಬಿಸುತ್ತಿದ್ದಾರೆ ಎಂದು ಪರಿಗಣಿಸಿ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಬಾರದು’ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತು.

‘ಕೋವಿಡ್‌ನಿಂದಾಗಿ ಸಂಕಷ್ಟದಲ್ಲಿರುವ ಜನರು ಇಂಥ ಪೋಸ್ಟ್‌ಗಳನ್ನು ಮಾಡಿದಾಗ ಅವರ ವಿರುದ್ಧ ಕ್ರಮ ತೆಗೆದುಕೊಂಡರೆ ಅದನ್ನು ನ್ಯಾಯಾಂಗ ನಿಂದನೆ ಎಂದೇ ಪರಿಗಣಿಸಲಾಗುವುದು’ ಎಂದೂ ಎಚ್ಚರಿಸಿತು.

‘ಸೋಂಕಿತ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರಿಗೂ ಹಾಸಿಗೆ ಸಿಗುತ್ತಿಲ್ಲ’ ಎಂಬ ಬಗ್ಗೆ ನ್ಯಾಯಪೀಠವು, ‘ಪರಿಸ್ಥಿತಿ ಗಂಭೀರವಾಗಿದೆ. ಕಳೆದ 70 ವರ್ಷಗಳ ಅವಧಿಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಒದಗಿಸಿರುವ ಮೂಲಸೌಕರ್ಯ ಯಾವುದಕ್ಕೂ ಸಾಕಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.