ADVERTISEMENT

ಜನವರಿ 1ರಿಂದ ಬದಲಾಗಲಿವೆ ಈ ನಿಯಮಗಳು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 15:55 IST
Last Updated 25 ಡಿಸೆಂಬರ್ 2020, 15:55 IST
   

2021ರಜನವರಿ 1ರಿಂದ ವರ್ಷವಷ್ಟೇ ಬದಲಾಗುವುದಿಲ್ಲ. ನಿಮ್ಮ ದಿನನಿತ್ಯದ ಜೀವನಕ್ಕೆ ಸಂಬಂಧಿಸಿದ ವ್ಯವಹಾರದ ನಿಯಮಗಳಲ್ಲೂ ಬದಲಾವಣೆ ಆಗಲಿದೆ. ಚೆಕ್ ಮೂಲಕ ಹಣಪಾವತಿ, ಕಾಂಟ್ಯಾಕ್ಟ್ ಲೆಸ್ ಕಾರ್ಡ್ ವಹಿವಾಟು, ಫಾಸ್ಟ್ಯಾಗ್ ಕಡ್ಡಾಯ ಸೇರಿದಂತೆ ಹಲವು ನಿಯಮಾವಳಿಗಳು ಬದಲಾಗಲಿದೆ.

1. ಚೆಕ್ ಮೂಲಕ ಹಣ ಪಾವತಿ

ಬ್ಯಾಂಕ್ ವ್ಯವಹಾರದಲ್ಲಿ ವಂಚನೆ ತಡೆಯುವ ನಿಟ್ಟಿನಲ್ಲಿ ಕೆಲ ತಿಂಗಳ ಹಿಂದೆ ಆರ್‌ಬಿಐ ಚೆಕ್ ಮೂಲಕ ಹಣ ಪಾವತಿಗೆ ಪಾಸಿಟಿವ್ ಪೇ ಸಿಸ್ಟಂ ಅನ್ನು ಪರಿಚಯಿಸಿತ್ತು. ಅಂದರೆ, ಯಾರಿಗಾದರೂ ನೀವು ₹50,000ಕ್ಕಿಂತ ಅಧಿಕ ಮೊತ್ತದ ಚೆಕ್ ನೀಡಿದಾಗ ಆ ಕುರಿತ ಮಾಹಿತಿಗಳನ್ನು ಬ್ಯಾಂಕ್‌ಗೆ ನೀಡಿ ಮರುಖಚಿತಪಡಿಸುವ ವ್ಯವಸ್ಥೆ ಇದಾಗಿದೆ. ಚೆಕ್ ಮೂಲಕ ಹಣ ಪಾವತಿಗೆ ಸಂಬಂಧಿಸಿದ ಪಾಸಿಟಿವ್ ಪೇ ಸಿಸ್ಟಂ ಜನವರಿ 1ರಿಂದ ಜಾರಿಗೆ ಬರಲಿದೆ. ಈ ನಿಯಮವನ್ನು ಅಳಪಡಿಸಿಕೊಳ್ಳುವುದು ಖಾತೆದಾರನಿಗೆ ಬಿಟ್ಟ ವಿಷಯವಾಗಿದ್ದರೂ 5 ಲಕ್ಷಕ್ಕೂ ಮೇಲ್ಪಟ್ಟ ಹಣದ ವರ್ಗಾವಣೆಗೆ ಪಾಸಿಟಿವ್ ಪೇ ಸಿಸ್ಟಂ ಕಡ್ಡಾಯಗೊಳಿಸುವ ಅಧಿಕಾರ ಬ್ಯಾಂಕ್‌ಗಳಿಗಿರುತ್ತದೆ.

ADVERTISEMENT

2.ಕಾಂಟ್ಯಾಕ್ಟ್ ಲೆಸ್ ಕಾರ್ಡ್ ವಹಿವಾಟು ಮಿತಿ

ಸಂಪರ್ಕ ರಹಿತ ಕಾರ್ಡ್‌ಗಳ ವಹಿವಾಟಿನ ಮಿತಿಯನ್ನು 2021 ರ ಜನವರಿ 1 ರಿಂದ 2,000 ರೂ.ಗಳಿಂದ 5,000 ರೂ.ಗೆ ಹೆಚ್ಚಿಸಲಾಗುವುದು ಎಂದು ರಿಸರ್ವ್ ಬ್ಯಾಂಕ್ ಇಂಡಿಯಾ ಹೇಳಿದೆ. ಇದು ಡಿಜಿಟಲ್ ಪಾವತಿಗಳನ್ನು ಮತ್ತಷ್ಟು ಸುರಕ್ಷಿತ ಮತ್ತು ಸದೃಢಗೊಳಿಸುವುದರ ಹಂತವಾಗಿದೆ. ವಿಶೇಷವಾಗಿ ಪ್ರಸ್ತುತ ಕೊರೋನಾ ಸಾಂಕ್ರಾಮಿಕ ಸೋಂಕಿನ ಸಮಯದಲ್ಲಿ ಈ ನಿಯಮ ಮತ್ತಷ್ಟು ಅನುಕೂಲವಾಗಿದೆ ಎಂದು ಆರ್‌ಬಿಐ ತಿಳಿಸಿದೆ.

3. ಕೆಲ ಆಯ್ದ ಫೋನ್‌ಗಳಲ್ಲಿ ಕಾರ್ಯಸ್ಥಗಿತಗೊಳಿಸಲಿರುವ ವಾಟ್ಸ್‌ಆ್ಯಪ್

ಜನಪ್ರಿಯ ಮೆಸೆಜಿಂಗ್ ವೇದಿಕೆಯಾಗಿರುವ ವಾಟ್ಸ್‌ಆ್ಯಪ್ 2021, ಜನವರಿ 1ರಿಂದ ಕೆಲ ಆಯ್ದ ಐಫೋನ್ ಮತ್ತು ಆಂಡ್ರಾಯ್ಡ್ ಚಾಲಿತ ಫೋನ್‌ಗಳಲ್ಲಿ ಕಾರ್ಯಸ್ಥಗಿತಗೊಳಿಸಲಿದೆ. ಓಎಸ್ 4.0.3 ವರ್ಶನ್ ಹೊಂದಿರುವ ಆಂಡ್ರಾಯ್ಡ್ ಫೋನ್‌ಗಳು ಮತ್ತು ಅದಕ್ಕಿಂತ ಹಳೆ ಫೋನ್, ಐಫೋನ್‌ನ ಐಒಎಸ್ 9 ಮತ್ತು ಹಳೆಯ ಮಾದರಿಯ ಫೋನ್‌, ಕೆಒಎಎಸ್ 2.5.1 ಮಾದರಿಯ ಜಿಯೋ ಫೋನ್ ಮತ್ತು ಜಿಯೋ ಫೋನ್ 2 ವಾಟ್ಸ್ಸ್ಆಪ್ ಬೆಂಬಲ ನಿಲ್ಲಿಸುತ್ತಿದೆ.

4. ಎಲ್ಲ ನಾಲ್ಕು ಚಕ್ರ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ

2021, ಜನವರಿ 1ರಿಂದ ಎಲ್ಲ ನಾಲ್ಕು ಚಕ್ರದ ವಾಹನಗಳಿಗೆ ಫಾಸ್‌ಟ್ಯಾಗ್ ಕಡ್ಡಾಯಗೊಳಿಸಿ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ. 2017 ಡಿಸೆಂಬರ್ 1ಕ್ಕಿಂತ ಮುಂಚೆ ಖರೀದಿಯಾಗಿರುವ ಎಂ ಮತ್ತು ಎನ್ ವರ್ಗದ ವಾಹನಗಳಿಗೆ ಫಾಸ್‌ಟ್ಯಾಗ್ ಕಡ್ಡಾಯವಾಗಲಿದೆ. ಇದಕ್ಕಾಗಿ, 1989ರ ಮೋಟಾರು ವಾಹನ ನಿಯಮಾವಳಿಗೆ ತಿದ್ದುಪಡಿ ತರಲಾಗಿದ್ದು, ನವೆಂಬರ್ 6ರಂದೇ ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ.


5. ಜಿಎಸ್‌ಟಿ ನೋಂದಾಯಿತ ಸಣ್ಣ ಘಟಕಗಳು

5 ಕೋಟಿ ರೂ.ಗಳ ವಹಿವಾಟು ಹೊಂದಿರುವ ವ್ಯಾಪಾರಿಗಳು ಜನವರಿ 12 ರ ಬದಲು ಜನವರಿಯಿಂದ ಕೇವಲ ನಾಲ್ಕು ಜಿಎಸ್ಟಿ ಸೇಲ್ಸ್ ರಿಟರ್ನ್ಸ್ ಅಥವಾ ಜಿಎಸ್ಟಿಆರ್ -3 ಬಿ ಅನ್ನು ಸಲ್ಲಿಸಬೇಕಾಗುತ್ತದೆ. ಇದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯ ಒಟ್ಟು ತೆರಿಗೆ ಮೂಲದ ಶೇ. 92 ರಷ್ಟಿರುವ ಸುಮಾರು 94 ಲಕ್ಷ ತೆರಿಗೆದಾರರ ಮೇಲೆ ಪರಿಣಾಮ ಬೀರುತ್ತದೆ. ಇದರೊಂದಿಗೆ, ಜನವರಿಯಿಂದ, ಸಣ್ಣ ತೆರಿಗೆದಾರರು ಒಂದು ವರ್ಷದಲ್ಲಿ ಕೇವಲ ಎಂಟು ರಿಟರ್ನ್‌ಗಳನ್ನು (ನಾಲ್ಕು ಜಿಎಸ್‌ಟಿಆರ್ -3 ಬಿ ಮತ್ತು ನಾಲ್ಕು ಜಿಎಸ್‌ಟಿಆರ್ -1 ರಿಟರ್ನ್ಸ್) ಸಲ್ಲಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.