ADVERTISEMENT

ಕಣಿವೆ ರಾಜ್ಯದಲ್ಲಿ ಚಿಗುರೊಡೆಯುತ್ತಿದೆ ತೃತೀಯ ರಂಗದ ಕನಸು

ಪಿಡಿಪಿ, ಎನ್‌ಸಿ ದೂರವಿಟ್ಟು ಸರ್ಕಾರ ರಚನೆಗೆ ಚಿಂತನೆ, ತೆರೆಯಮರೆಯಲ್ಲಿ ಬಿಜೆಪಿ ಕಸರತ್ತು

ಸಿದ್ಧರಾಜು ಎಂ.
Published 29 ಜನವರಿ 2020, 12:18 IST
Last Updated 29 ಜನವರಿ 2020, 12:18 IST
ಜಮ್ಮು ಮತ್ತು ಕಾಶ್ಮೀರ
ಜಮ್ಮು ಮತ್ತು ಕಾಶ್ಮೀರ   

ಶ್ರೀನಗರ: ರಾಜ್ಯದಲ್ಲಿ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ನಂತರ ಕಣಿವೆ ರಾಜ್ಯದಲ್ಲಿ ಮನೆಮಾಡಿರುವ ರಾಜಕೀಯ ಅನಿಶ್ಚಿತತೆಗೆ ಅಂತ್ಯ ಹಾಡಲು ತೆರೆಮರೆಯಲ್ಲಿರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಜಮ್ಮು ಮತ್ತು ಕಾಶ್ಮೀರದ ಪ್ರಮುಖ ಪ್ರಾದೇಶಿಕ ಪಕ್ಷಗಳನ್ನು ಹೊರಗಿಟ್ಟು ‘ತೃತೀಯ ರಂಗ’ ರಚಿಸುವ ಕಸರತ್ತು ನಡೆಯುತ್ತಿದೆೆ. ನ್ಯಾಶನಲ್‌ ಕಾನ್ಫೆರೆನ್ಸ್‌ (ಎನ್‌ಸಿ) ಮತ್ತು ಪಿಡಿಪಿಯಂತಹ ಪ್ರಬಲ ಪ್ರಾದೇಶಿಕ ಪಕ್ಷಗಳನ್ನು ಹೊರಗಿಟ್ಟು ಸ್ಥಳೀಯ ಇನ್ನಿತರ ಪಕ್ಷಗಳನ್ನು ಒಗ್ಗೂಡಿಸಿ ತೃತೀಯ ರಂಗ ಹುಟ್ಟು ಹಾಕುವ ಪ್ರಯತ್ನಕ್ಕೆ ಬಿಜೆಪಿ ನೀರೆರೆಯುತ್ತಿದೆ. ಬಿಜೆಪಿ ಬೆಂಬಲಿತ ತೃತೀಯ ರಂಗದ ಮೂಲಕ ಆಡಳಿತ ಚುಕ್ಕಾಣಿ ಹಿಡಿಯುವ ತಂತ್ರ ಸಿದ್ಧವಾಗಿದೆ.

2019ರ ಆಗಸ್ಟ್‌ 5ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ, 370ನೇ ವಿಧಿಯು ರಾಜ್ಯದಲ್ಲಿ ಪ್ರತ್ಯೇಕತಾವಾದ, ಭಯೋತ್ಪಾದನೆ, ಕುಟುಂಬದ ಆಡಳಿತ ಹಾಗೂ ಭ್ರಷ್ಟಾಚಾರಕ್ಕೆ ಕಾರಣವಾಗಿದೆ ಎಂದು ಪ್ರತಿಪಾದಿಸುತ್ತಲೇ ಬಂದಿದ್ದಾರೆ.

ADVERTISEMENT

2014ರ ವಿಧಾನಸಭೆ ಚುನಾವಣೆ ವೇಳೆ ಮೋದಿ, ಕುಟುಂಬ ರಾಜಕಾರಣದಲ್ಲಿ ತೊಡಗಿರುವ ಪಕ್ಷಗಳು (ನ್ಯಾಷನಲ್‌ ಕಾನ್ಫೆರೆನ್ಸ್‌ ಹಾಗೂ ಪೀಪಲ್‌ ಡೆಮಾಕ್ರಟಿಕ್‌ ಪಾರ್ಟಿ) ರಾಜ್ಯದಲ್ಲಿ ಲೂಟಿಯಲ್ಲಿ ತೊಡಗಿವೆ ಎಂದು ಆರೋಪಿಸಿದ್ದರು. ನಂತರ ಬಂದ ಅತಂತ್ರ ಫಲಿತಾಂಶದಲ್ಲಿ ಪಿಡಿಪಿ–ಬಿಜೆಪಿ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ನಂತರ ರಾಜಕೀಯ ವಿದ್ಯಮಾನಗಳು ತಿರುವು ತೆಗೆದುಕೊಂಡವು. 2018ರ ಜೂನ್‌ನಲ್ಲಿ ಬಿಜೆಪಿ–ಪಿಡಿಪಿ ಮೈತ್ರಿಕೂಟದ ಸರ್ಕಾರ ಮುರಿದು ಬಿದ್ದಿತ್ತು.

ಕಣಿವೆ ರಾಜ್ಯದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಕಾಶ್ಮೀರದ ಬಹುತೇಕ ಮುಂಚೂಣಿ ನಾಯಕರಾದ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್‌ ಅಬ್ದುಲ್ಲ, ಅವರ ಮಗ ಒಮರ್‌ ಅಬ್ದುಲ್ಲ,ಮೆಹಬೂಬಾ ಮುಫ್ತಿ ಅವರನ್ನು ಗೃಹಬಂಧನದಲ್ಲಿ ಇಡಲಾಗಿದೆ. ಮೂವರು ಮಾಜಿ ಮುಖ್ಯಮಂತ್ರಿಗಳು ಹಾಗೂ ಎನ್‌ಸಿ ಹಾಗೂ ಪಿಡಿಪಿ ಮುಖ್ಯಸ್ಥರು ಇನ್ನೂ ಗೃಹ ಬಂಧನದಲ್ಲಿದ್ದಾರೆ.

ಪಿಡಿಪಿಯಿಂದ ಹೊರಗಿರುವ ಮಾಜಿ ಹಣಕಾಸು ಸಚಿವ ಅಲ್ತಾಫ್‌ ಬುಖಾರಿ ನೇತೃತ್ವದ ಪಕ್ಷದ ಎಂಟು ಬಂಡಾಯ ನಾಯಕರು, ಹೊಸ ಸರ್ಕಾರ ರಚನೆಗೆ ಕಳೆದ ಎರಡೂ ತಿಂಗಳಿಂದ ಚರ್ಚೆ ನಡೆಸಿದ್ದಾರೆ ಎಂಬ ವರದಿಗಳಿವೆ.

ಕೇಂದ್ರ ಸರ್ಕಾರ ಇತ್ತೀಚೆಗೆ ಪಿಡಿಪಿಯ ಸಹ ಸಂಸ್ಥಾಪಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಮುಜಾಫ್ಫರ್‌ ಹುಸೇನ್ ಬೇಗ್‌ ಅವರಿಗೆ ಇತ್ತೀಚೆಗೆ ದೇಶದ ಮೂರನೇ ಅತಿದೊಡ್ಡ ಪ್ರಶಸ್ತಿಯಾದ ಪದ್ಮಭೂಷಣ ನೀಡಿದೆ. ಬೇಗ್‌ ಹಾಗೂ ಬುಖಾರಿ ಅವರು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ವಿರುದ್ಧ ಬಹಿರಂಗ ಸಮರ ಸಾರಿದ್ದಾರೆ.

ಬುಖಾರಿ ಅವರು ಇದೇ ತಿಂಗಳ ಮೊದಲ ವಾರದಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಗಿರೀಶ್‌ಚಂದ್ರ ಮುರ್ಮು ಅವರನ್ನು ಭೇಟಿ ಮಾಡಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಂದು ಹೊಸ ತೃತೀಯ ರಂಗದ ಉದಯಕ್ಕೆ ಪುಷ್ಟಿ ನೀಡುತ್ತಿವೆ. ಬುಖಾರಿ ನೇತೃತ್ವದ ತಂಡವು ನ್ಯಾಷನಲ್‌ ಡೆಮಾಕ್ರಟಿಕ್‌, ಪಿಡಿಪಿ, ಕಾಂಗ್ರೆಸ್‌ ಹಾಗೂ ಪೀಪಲ್ಸ್‌ ಕಾನ್ಫೆರೆನ್ಸ್‌ ನಾಯಕರ ಜತೆ ನಿರಂತರ ಸಂಪರ್ಕದಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಎನ್‌ಸಿ, ಪಿಡಿಪಿ ಹಾಗೂ ಇತರೆ ಪಕ್ಷದ ಎಲ್ಲ ಬಂಡಾಯ ಶಾಸಕರು ಒಂದೆಡೆ ಸೇರಿ ಸರ್ಕಾರ ರಚನೆಗೆ ಮುಂದಾಗುವಂತೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಸೂಚಿಸಿದೆ. ಬುಖಾರಿ ನೇತೃತ್ವದ ತಂಡ ಅಧಿಕಾರ ಹಿಡಿಯಲು ಅಗತ್ಯ ಸಹಕಾರವನ್ನು ನೀಡುವಂತೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ನಿರ್ದೇಶನ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಈ ನಡುವೆ ಮೆಹಬೂಬಾ ಮುಫ್ತಿ, ಫಾರೂಕ್‌ ಹಾಗೂ ಒಮರ್‌ ಸೇರಿದಂತೆ ಇತರೆ ನಾಯಕರ ಹೊರತುಪಡಿಸಿದ ಅರ್ಥಪೂರ್ಣ ಒಕ್ಕೂಟ ರಚಿಸಿಕೊಳ್ಳುವಂತೆ ಹಲವರು ಸಲಹೆ ನೀಡಿದ್ದಾರೆ.

ವಿಶೇಷ ಸ್ಥಾನಮಾನ ನೀಡುವ 371 ವಿಧಿಯನ್ನು ಕಾಶ್ಮೀರಿಗಳಿಗೆ ವಿಸ್ತರಿಸಲು ಒತ್ತಾಯಿಸಿ ಸ್ವಯಂಘೋಷಿತ ತೃತೀಯ ರಂಗದ ನಾಯಕರು ಶೀಘ್ರವೇ ಮನವಿ ಸಲ್ಲಿಸಲಿದ್ದು, ಇದರಲ್ಲಿ ಅವರು ವಿಫಲರಾಗಲಿದ್ದಾರೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ನಾಯಕ ಸೈಫ್‌–ಉದ್‌–ದಿನ್‌–ಸೋಜ್‌ ಹೇಳಿದ್ದಾರೆ.

ನಾಯಕರ ಬಿಡುಗಡೆ ಇಲ್ಲದೇ ಯಾವುದೇ ರಾಜಕೀಯ ಚಟುವಟಿಕೆ ನಡೆಯುವುದಿಲ್ಲ ಎಂದು ಚುನಾವಣಾ ವೀಕ್ಷಕರೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.