ADVERTISEMENT

ಒಡಿಶಾ: ಭೀತರ್‌ಕನಿಕಾ ರಾಷ್ಟ್ರೀಯ ಉದ್ಯಾನದಲ್ಲಿ ವಲಸೆ ಹಕ್ಕಿಗಳ ದಂಡು

ಪಿಟಿಐ
Published 24 ನವೆಂಬರ್ 2020, 11:48 IST
Last Updated 24 ನವೆಂಬರ್ 2020, 11:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೇಂದ್ರಪರಾ(ಒಡಿಶಾ): ಚಳಿಗಾಲದ ಆರಂಭದಲ್ಲಿ ಒಡಿಶಾದ ಭೀತರ್‌ಕನಿಕಾ ರಾಷ್ಟ್ರೀಯ ಉದ್ಯಾನವನದ ಜೌಗು ಪ್ರದೇಶಗಳಲ್ಲಿ ವಿದೇಶಿ ಹಕ್ಕಿಗಳ ಹಾರಾಟ ಆರಂಭವಾಗಿದೆ.

'ಕೇಂದ್ರಪರಾ ಜಿಲ್ಲೆಯ ಜೌಗು ಪ್ರದೇಶದಲ್ಲಿ ಹಕ್ಕಿಗಳ ಚಿಲಿಪಿಲಿ ಕೇಳಿಸುತ್ತಿದೆ ಎಂದರೆ, ಈ ರೆಕ್ಕೆಯ ಮಿತ್ರರು ಚಳಿಗಾಲದ ಪ್ರವಾಸಕ್ಕಾಗಿ ಆಗಮಿಸಿದ್ದಾರೆ ಎಂಬ ಸೂಚನೆ‘ ಎನ್ನುತ್ತಾರೆ ಅರಣ್ಯ ಅಧಿಕಾರಿ.

‘ಚಳಿಗಾಲ ಈಗಷ್ಟೇ ಆರಂಭವಾಗಿದೆ. ಈ ಒಂದು ವಾರದಲ್ಲಿ ಸುಮಾರು 15,000 ಪಕ್ಷಿಗಳು ಬಂದಿವೆ‘ ಎಂದು ರಾಜನಗರ ಮ್ಯಾಂಗ್ರೋವ್ (ವನ್ಯಜೀವಿ) ವಿಭಾಗೀಯ ಅರಣ್ಯ ಅಧಿಕಾರಿ ಬಿಕಾಶ್ ರಂಜನ್ ದಾಸ್ ಹೇಳಿದ್ದಾರೆ.

ADVERTISEMENT

ರಾಯ್‌ಪಾಟಿಯಾ ಮತ್ತು ಸತಭಯಾ ನದಿ ಪ್ರದೇಶದಲ್ಲಿ ಹಾಗೂ ಸುಮಾರು ಒಂದು ಕಿಲೋಮೀಟರ್ ವಿಸ್ತಾರವಾದ ಮ್ಯಾಂಗ್ರೋವ್ ಕಾಡಿನಲ್ಲಿರುವ ಝರಿಯ ದಂಡೆಯ ಮೇಲೆ ಈ ಪಕ್ಷಿಗಳು ಕಾಣಿಸುತ್ತಿವೆ. ಈ ಪಕ್ಷಿಗಳಲ್ಲಿ ಬಹುತೇಕವು ಮಧ್ಯ ಏಷ್ಯಾ ರಾಷ್ಟ್ರಗಳಿಂದ ವಲಸೆ ಬಂದಿರುವಂತವು‘ ಎಂದು ಅವರು ಹೇಳಿದರು.

ಚಳಿಗಾಲ ಮುಂದುವರಿದಂತೆ, ಪಕ್ಷಿಗಳ ಸಂಖ್ಯೆಯು ಗಣನೀಯವಾಗಿ ಹೆಚ್ಚಾಗುತ್ತದೆ. ತಮ್ಮ ಮೂಲ ಆವಾಸಸ್ಥಾನ ಹಾಗೂ ಉತ್ತರಾರ್ಧ ಗೋಳಾರ್ಧದಲ್ಲಿ ಬದಲಾಗುವ ಹವಾಮಾನದಿಂದ ಪಾರಾಗಲು ಪ್ರತಿ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ಈ ಭಾಗದತ್ತ ಬರುತ್ತವೆ'ಎಂದು ದಾಸ್ ಹೇಳಿದರು.

ಭೀತರ್‌ಕನಿಕಾ ರಾಷ್ಟ್ರೀಯ ಉದ್ಯಾನ ಹಾಗೂ ಚಿಲ್ಕಾ ಸರೋವರ ಪ್ರದೇಶಗಳಲ್ಲಿ ಮಾನವ ಹಸ್ತಕ್ಷೇಪ ಇಲ್ಲ. ಆಹಾರ ಹುಡುಕಾಟಕ್ಕೆ ತೊಂದರೆಯಿಲ್ಲ. ಸದಾ ನೀರು ಹರಿಯುವ ತಾಣಗಳಿರುವ ಪ್ರದೇಶ. ಮುಖ್ಯವಾಗಿ ವಾಸಕ್ಕ ಯೋಗ್ಯ ಜಾಗವಾಗಿದೆ. ಈ ಎಲ್ಲ ಕಾರಣದಿಂದ ವಲಸೆ ಹಕ್ಕಿಗಳು ಈ ಪ್ರದೇಶಗಳಿಗೆ ವಲಸೆ ಬರುತ್ತವೆ ಎಂಬುದು ತಜ್ಞರ ಅಭಿಮತ.

ಚಳಿಗಾಲದ ಆರಂಭದಲ್ಲಿ ವಲಸೆ ಬರುವ ಪಕ್ಷಿಗಳು ಮಾರ್ಚ್‌ ಅಂತ್ಯದವರೆಗೂ ಜೌಗು ಪ್ರದೇಶಗಳನ್ನೇ ತಮ್ಮ ಮನೆಯನ್ನಾಗಿ ಮಾಡಿಕೊಂಡಿರುತ್ತವೆ. ಇವುಗಳಲ್ಲಿ ಕೆಲವು ಪಕ್ಷಿಗಳು ಬೇಸಿಗೆ ಆರಂಭದೊಂದಿಗೆ ತಮ್ಮ ತಾಯ್ನಾಡಿಗೆ ಹಿಂದಿರುಗುತ್ತವೆಎಂದು ವಿವರಿಸಿದರು ದಾಸ್‌.

ಈ ವರ್ಷ ಭೀತರ್‌ಕನಿಕಾಗೆ ಬಂದಿರುವ ಅಳಿವಿನಂಚಿನ ವಲಸೆ ಪಕ್ಷಿಗಳಲ್ಲಿ ಇಂಡಿಯನ್ ಸ್ಕಿಮ್ಮರ್ಸ್, ಕಂದು ಹೆಜ್ಜಾರ್ಲೆ, ಬಿಳಿಬೆನ್ನಿನ ರಣಹದ್ದು, ಸಿಪಾಯಿ ಕೊಕ್ಕರೆ ಪ್ರಮುಖವು ಎಂದು ಅವುಗಳ ಹೆಸರನ್ನು ಉಲ್ಲೇಖಿಸಿದರು.

ಇವುಗಳ ಜತೆಗೆ ಕಪ್ಪುಬಾಲದ ಹಿನ್ನೀರ ಗೊರವ, ಸೂಜಿಬಾಲದ ಬಾತು, ಸಿಳ್ಳೆಬಾತು, ಬೂದು ಗೊರವ, ಬೆಳ್ಳಕ್ಕಿಗಳು, ಹಾವಕ್ಕಿ, ಬಿಳಿಹೊಟ್ಟೆಯ ಕಡಲಕ್ಕಿ ಕಪ್ಪು ಕತ್ತಿನ ಕೊಕ್ಕರೆ – ಇವು ಚಳಿಗಾಲದಲ್ಲಿ ಬರುವಂತಹ ಪಕ್ಷಿಗಳಾಗಿವೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.