ADVERTISEMENT

ಗಡ್ಕರಿಗೆ ಬೆದರಿಕೆ ಕರೆ: ಹಿಂಡಲಗಾ ಜೈಲಿನಲ್ಲಿರುವ ಆರೋಪಿ ನಾಗ್ಪುರ ಪೊಲೀಸರ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 11:35 IST
Last Updated 28 ಮಾರ್ಚ್ 2023, 11:35 IST
ನಿತಿನ್‌ ಗಡ್ಕರಿ
ನಿತಿನ್‌ ಗಡ್ಕರಿ   

ನಾಗ್ಪುರ: ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರ ಕಚೇರಿಗೆ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಬೆದರಿಕೆ ಕರೆಗಳು ಬಂದ ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿ ಜೈಲಿನಲ್ಲಿ ಶಿಕ್ಷೆಗೆ ಗುರಿಯಾಗಿರುವ ಕೊಲೆ ಪ್ರಕರಣವೊಂದರ ದೋಷಿಯನ್ನು ನಾಗ್ಪುರ ಪೊಲೀಸರು ಮಂಗಳವಾರ ವಶಕ್ಕೆ ಪಡೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಯೇಶ್‌ ಪೂಜಾರಿ ಎಂದು ಗುರುತಿಸಲಾಗಿರುವ ದೋಷಿಯನ್ನು ಹಿಂಡಲಗಾ ಜೈಲಿನಿಂದ ವಶಕ್ಕೆ ಪಡೆದು ಬೆಳಿಗ್ಗೆಯೇ ವಿಮಾನದ ಮೂಲಕ ನಾಗ್ಪುರಕ್ಕೆ ಕರೆದೊಯ್ಯಲಾಯಿತು. ಸಚಿವರ ಕಚೇರಿಗೆ ಬೆದರಿಕೆ ಕರೆ ಮಾಡಿರುವುದರ ಹಿಂದೆ ಆತನಿಗಿದ್ದ ಉದ್ದೇಶ ತಿಳಿದುಕೊಳ್ಳುವ ಸಲುವಾಗಿ ಆತನನ್ನು ವಿಚಾರಣೆಗೆ ಒಳಪಡಿಸಲಾಗುವುದು. ಮಧ್ಯಾಹ್ನ ಆತನನ್ನು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಜಯೇಶ್‌ ಪೂಜಾರಿ ಎಂದು ಹೇಳಿಕೊಂಡಿದ್ದ ವ್ಯಕ್ತಿಯೊಬ್ಬನಿಂದ ಜನವರಿ 14ರಂದು ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಬೆದರಿಕೆ ಕರೆ ಬಂದಿತ್ತು. ಕರೆ ಮಾಡಿದಾತ ₹100 ಕೋಟಿಗೆ ಬೇಡಿಕೆ ಇಟ್ಟಿದ್ದ. ಜೊತೆಗೆ, ತಾನು ಭೂಗತಪಾತಕಿ ದಾವೂದ್‌ ಇಬ್ರಾಹಿಂ ತಂಡದ ಸದಸ್ಯ ಎಂದು ಹೇಳಿಕೊಂಡಿದ್ದ. ಅದೇ ವ್ಯಕ್ತಿಯಿಂದ ಮಾರ್ಚ್‌ 21ರಂದೂ ಗಡ್ಕರಿ ಕಚೇರಿಗೆ ಬೆದರಿಕೆ ಕರೆ ಬಂದಿತ್ತು. ಆಗ ₹10 ಕೋಟಿಗೆ ಬೇಡಿಕೆ ಇಡಲಾಗಿತ್ತು.

ADVERTISEMENT

ಜಯೇಶ್‌ ವಿರುದ್ಧ ನಾಗ್ಪುರದ ದಾಂತೋಳಿ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.

ಆದರೆ, ಈ ಆರೋಪವನ್ನು ಪೂಜಾರಿ ತಳ್ಳಿಹಾಕಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.