ADVERTISEMENT

ರಾಜಸ್ಥಾನ: ಕಲ್ಲಿದ್ದಲು ಹೊಗೆ ಸೇವಿಸಿ ಮೂರು ವರ್ಷದ ಮಗು ಸೇರಿ ಮೂವರು ಸಾವು

ಪಿಟಿಐ
Published 9 ಜನವರಿ 2023, 13:15 IST
Last Updated 9 ಜನವರಿ 2023, 13:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜೈಪುರ: ಮನೆಯಲ್ಲಿ ಆವರಿಸಿದ್ದ ಕಲ್ಲಿದ್ದಲು ಹೊಗೆ ಸೇವಿಸಿ ಮೂರು ವರ್ಷದ ಮಗು ಹಾಗೂ ಇಬ್ಬರು ಮಹಿಳೆಯರು ಮೃತಪಟ್ಟಿರುವ ದುರಂತ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ವರದಿಯಾಗಿದೆ.

ಜಿಲ್ಲೆಯ ರತನ್‌ಗಢ ಪ್ರದೇಶದಲ್ಲಿರುವ ಸಾರ್‌ ಹಳ್ಳಿಯಲ್ಲಿ ಭಾನುವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯತ್ರಿ (30), ಅವರ ಮೂರು ವರ್ಷದ ಹೆಣ್ಣು ಮಗು, ಎರಡು ತಿಂಗಳು ಗಂಡು ಮಗು ಮತ್ತು ಆಕೆಯ ಅತ್ತೆ ಸೋನಾ ದೇವಿ (60) ಅವರು ಮನೆಯ ಒಂದು ಕೋಣೆಯಲ್ಲಿ ಮಲಗಿದ್ದರು. ಕೋಣೆಯನ್ನು ಬೆಚ್ಚಗಿರಿಸಲು ಕಬ್ಬಿಣದ ಒಲೆಯಲ್ಲಿ ಕಲ್ಲಿದ್ದಲನ್ನು ಉರಿಯಲು ಇಡಲಾಗಿತ್ತು. ಬೆಳಗ್ಗೆಯಾದರೂ ಕೋಣೆಯಿಂದ ಯಾರೊಬ್ಬರೂ ಹೊರಗೆ ಬಂದಿರಲಿಲ್ಲ. ಇದರಿಂದಾಗಿ ದೇವಿ ಅವರ ಪತಿ ಬಾಗಿಲು ತಟ್ಟಿ ಕೂಗಿದ್ದರು. ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ನೆರೆಹೊರೆಯವರನ್ನು ಕೂಗಿ ಬಾಗಿಲು ಮುರಿದು ಒಳಗೆ ಹೋಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಈ ವೇಳೆ ನಾಲ್ವರೂ ಪ್ರಜ್ಞೆ ಇಲ್ಲದೆ ಮಲಗಿರುವುದು ಕಂಡುಬಂದಿದೆ. ತಕ್ಷಣವೇ ಎಲ್ಲರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಶಿಶು ಹೊರತುಪಡಿಸಿ ಉಳಿದವರೆಲ್ಲರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.