ADVERTISEMENT

ಜಮ್ಮುವಿನಲ್ಲಿ ಭೂಕುಸಿತ: ಮೂವರ ಸಾವು

Three killed, one injured in landslides in Poonch, Reasi

ಪಿಟಿಐ
Published 22 ಫೆಬ್ರುವರಿ 2019, 12:01 IST
Last Updated 22 ಫೆಬ್ರುವರಿ 2019, 12:01 IST
ಭೂಕುಸಿತದಿಂದಾಗಿ ವಾಹನಗಳು ಸಾಲುಗಟ್ಟಿ ನಿಂತಿವೆ.
ಭೂಕುಸಿತದಿಂದಾಗಿ ವಾಹನಗಳು ಸಾಲುಗಟ್ಟಿ ನಿಂತಿವೆ.   

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಹಾಗೂ ರಿಯಾಸಿ ಜಿಲ್ಲೆಗಳಲ್ಲಿ ಶುಕ್ರವಾರ ಸಂಭವಿಸಿದ ಭೂಕುಸಿತದಿಂದ ನಾಲ್ಕು ವರ್ಷದ ಬಾಲಕ ಸೇರಿ ಮೂವರು ಮೃತ‍ಪಟ್ಟಿದ್ದಾರೆ. ಬೈಲಾ ಪ್ರದೇಶದ ಮಂಡಿ ಪತೇಪುರ ರಸ್ತೆಯಲ್ಲಿ ಚಲಿಸುತ್ತಿದ್ದ ವಾಹನ ಭೂಕುಸಿತಕ್ಕೆ ಸಿಲುಕಿ, ವಾಹನದಲ್ಲಿದ್ದ ಮೂವರು ಅಸುನೀಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರಲ್ಲಿ ಒಬ್ಬರನ್ನು ಮಾಖೊ ಸಿಂಗ್‌ ಎಂದು ಗುರುತಿಸಲಾಗಿದೆ. ಗಾಯಗೊಂಡಿದ್ದ ಅಂಜುಮ್‌ ಮತ್ತು ದೀಪಕ್‌ ಅವರನ್ನು ಸೇನಾ ಸಿಬ್ಬಂದಿಯು ಆಸ್ಪತ್ರೆಗೆ ದಾಖಲಿಸಿದ್ದರು. ಅಂಜುಮ್‌ ಚೇತರಿಸಿಕೊಳ್ಳದೆ ಮೃತಪಟ್ಟಿದ್ದು, ದೀಪಕ್‌ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ರಿಯಾಸಿ ಜಿಲ್ಲೆಯ ಸಾರ ಗ್ರಾಮದಲ್ಲಿ ನಾಲ್ಕು ವರ್ಷದ ಬಾಲಕ ತನ್ನ ಪೋಷಕರ ಜತೆಯಲ್ಲಿ ಇರುವಾಗಲೇ ಉಂಟಾದ ಭೂಕುಸಿತಕ್ಕೆ ಸಿಲುಕಿ ಮೃತಪಟ್ಟಿದ್ದಾನೆ. ಬಾಲಕನ ಶವವನ್ನು ಹೊರ ತೆಗೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಹೆದ್ದಾರಿ ಸಂಚಾರ ಸ್ಥಗಿತ:ಜಮ್ಮು ಮತ್ತು ಕಾಶ್ಮೀರದ ರಂಬನ್‌ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಮತ್ತು ಭೂಕುಸಿತದಿಂದಾಗಿ ಮೂರನೇ ದಿನವೂ ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದ್ದು, 1,700ಕ್ಕೂ ಹೆಚ್ಚು ವಾಹನಗಳು ಹೆದ್ದಾರಿಯಲ್ಲಿ ಸಿಲುಕಿಕೊಂಡಿವೆ.

270 ಕಿ.ಮೀ ಉದ್ದದ ಈ ಹೆದ್ದಾರಿಯಲ್ಲಿ ಖುನಿ ನಲ್ಹಾ, ಪಂತಿಯಾಲ್‌, ದಿಗ್ಡೊಲೆ, ಬ್ಯಾಟರಿ ಚೆಸ್ಮಾ ಹಾಗೂ ಮಾರೂಗ್‌ ಹೀಗೆ ಐದು ಕಡೆಗಳಲ್ಲಿ ಭಾರಿ ಮಳೆಯಿಂದ ಭೂಕುಸಿತ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿಯ ರಂಬನ್‌, ಉಧಂಪುರ, ಜಮ್ಮು, ಸಾಂಬಾ ಹಾಗೂ ಕತುವಾದಲ್ಲಿ ವಾಹನಗಳು ಸಿಲುಕಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.