ADVERTISEMENT

ಶಸ್ತ್ರಚಿಕಿತ್ಸೆ ಬಳಿಕ ಹೊಟ್ಟೆಯಲ್ಲಿ ಕತ್ತರಿಗಳನ್ನು ಬಿಟ್ಟ ವೈದ್ಯರು!?

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2019, 14:07 IST
Last Updated 9 ಫೆಬ್ರುವರಿ 2019, 14:07 IST
   

ಹೈದರಾಬಾದ್‌: ವಿಪರೀತ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಎಕ್ಸ್‌ರೇ ತಪಾಸಣೆಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ ಪತ್ತೆಯಾಗಿದ್ದು ಶಸ್ತ್ರಚಿಕಿತ್ಸೆ ನಡೆಸುವ ಎರಡು ಕತ್ತರಿಗಳು!

ತೆಲಂಗಾಣ ಸರ್ಕಾರದ ಪ್ರತಿಷ್ಠಿತ ನಿಜಾಮ್‌ ವೈದ್ಯಕೀಯ ಕಾಲೇಜು ಆಸ್ಪತ್ರೆ(ನಿಮ್ಸ್‌)ಯಲ್ಲಿ ಈ ಘಟನೆ ನಡೆದಿದೆ. ಕಳೆದ ಮೂರು ತಿಂಗಳ ಹಿಂದೆ ಶಸ್ತ್ರಚಿಕಿತ್ಸೆ ನಡೆಸಿದವೈದ್ಯರ ಪ್ರಮಾದದಿಂದಾಗಿ ಈ ಎಡವಟ್ಟು ನಡೆದಿದೆ. ಶಸ್ತ್ರಚಿಕಿತ್ಸೆಯ ಬಳಿಕ ವೈದ್ಯರು ಕತ್ತರಿಯನ್ನು ಹೊರ ತೆಗೆಯದೇ ಹೊಟ್ಟೆಯಲ್ಲೇ ಬಿಟ್ಟು ಹೊಲಿಗೆ ಹಾಕಿದ್ದಾರೆ.

ಘಟನೆಯ ವಿವರ: ಹೈದರಾಬಾದ್‌ ನಿವಾಸಿಯಾದ ಮಹೇಶ್ವರಿ ಕಳೆದ ಅಕ್ಟೋರ್‌ 28ರಂದು ಹೊಟ್ಟೆ ನೋವು ಎಂದು ಹೇಳಿ ಆಸ್ಪತ್ರೆಗೆ ದಾಖಲಾಗಿದ್ದರು. ಹಲವು ಪರೀಕ್ಷೆಗಳನ್ನು ನಡೆಸಿದ ಬಳಿಕ ಅವರಿಗೆ ಶಸ್ತ್ರಚಿಕಿತ್ಸೆಗಾಗಿ ಸೂಚಿಸಲಾಗಿತ್ತು. ಅದರಂತೆ ನವೆಂಬರ್‌ ಮೊದಲ ವಾರದಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ನವೆಂಬರ್‌ 12ರಂದು ಅವರನ್ನು ಮನೆಗೆ ಕಳುಹಿಸಲಾಗಿತ್ತು ಎಂದು ನಿಮ್ಸ್‌ ನಿರ್ದೇಶಕ ಡಾ. ಮನೋಹರ್ ಮಾಹಿತಿ ನೀಡಿದ್ದಾರೆ.

ADVERTISEMENT

ಶಸ್ತ್ರಚಿಕಿತ್ಸೆ ನಡೆಸಿದ್ದ ವೈದ್ಯರ ತಂಡ ಆಪರೇಷನ್‌ ಬಳಿಕ ಎರಡು ಕತ್ತರಿಗಳನ್ನು (ಶಸ್ತ್ರಚಿಕಿತ್ಸೆ ನಡೆಸುವಾಗ ಬಳಸುವ ಕತ್ತರಿ ಆಕಾರದಲ್ಲಿ ಇರುವ ಸಲಕರಣೆ) ಹೊಟ್ಟೆಯಲ್ಲೇ ಬಿಟ್ಟು ಹೊಲಿಗೆ ಹಾಕಿದ್ದಾರೆ ಎಂಬುದನ್ನು ಮನೋಹರ್ ಒಪ್ಪಿಕೊಂಡಿದ್ದಾರೆ.

ಮನೆಗೆ ಮರಳಿದ್ದ ಮಹೇಶ್ವರಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಹೊಲಿಗೆ ಹಾಕಿದ್ದ ಭಾಗದ ಗಾಯ ಸಂಪೂರ್ಣವಾಗಿ ಗುಣವಾಗಿದ್ದರೂ ಹೊಟ್ಟೆ ನೋವು ಇತ್ತು. ಪರ್ಯಾಯ ಔಷಧಿಗಳನ್ನು ಬಳಕೆ ಮಾಡಿದ್ದರು ಹೊಟ್ಟೆ ನೋವು ಕಡಿಮೆಯಾಗಿರಲಿಲ್ಲ. ದಿನದಿಂದ ದಿನಕ್ಕೆ ಹೊಟ್ಟೆ ನೋವು ಜಾಸ್ತಿಯಾಯಿತು. ಬಳಿಕ ಇದೇ ಆಸ್ಪತ್ರೆಗೆ ಕರೆತಂದು ಪರೀಕ್ಷೆ ಮಾಡಿಸಲಾಯಿತು. ವೈದ್ಯರು ಎಕ್ಸರೇ ತಪಾಸಣೆ ಮಾಡಿದಾಗ ಹೊಟ್ಟೆಯಲ್ಲಿ ಎರಡು ಕತ್ತರಿಗಳು ಇರುವುದು ಪತ್ತೆಯಾಯಿತು ಎಂದು ಮಹೇಶ್ವರಿ ಸಂಬಂಧಿ ಮಹದೇವ್ ವಿವರಿಸಿದ್ದಾರೆ.

ಶನಿವಾರ ಮಹೇಶ್ವರಿ ಸಂಬಂಧಿಕರು ಮತ್ತು ಸಾರ್ವಜನಿಕರು ಆಸ್ಪತ್ರೆ ಎದುರು ಧರಣಿ ನಡೆಸಿ ತಪ್ಪಿತಸ್ಥ ವೈದ್ಯರ ವಿರುದ್ಧ ಅಗತ್ಯ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈಗಾಗಲೇ ಘಟನೆ ಕುರಿತಂತೆ ತನಿಖೆಗೆ ಆದೇಶ ಮಾಡಲಾಗಿದೆ. ವಿಚಾರಣೆಯ ಪ್ರಾಥಮಿಕ ಮಾಹಿತಿ ಪ್ರಕಾರ ಮೂವರು ವೈದ್ಯರಿರುವ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ. ಬೀರಪ್ಪ, ವೇಣು ಮತ್ತು ವರ್ಮಾ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು. ಘಟನೆ ಕುರಿತಂತೆ ಆಂತರಿಕ ವಿಚಾರಣೆ ಮುಂದುವರೆದಿದ್ದು ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮಕೈಗೊಳ್ಳುವುದಾಗಿ ಡಾ. ಮನೋಹರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.