ಬರ್ಲಿನ್: ಮಾನವನ ಬೆರಳ ತುದಿಯಲ್ಲಿ ಕೂರುವಷ್ಟು ಚಿಕ್ಕದಾದ ಹೊಸ ಪ್ರಭೇದದ ಗೋಸುಂಬೆ (ಊಸರವಳ್ಳಿ)ಯನ್ನು ಮಡಗಾಸ್ಕರ್ ಮತ್ತು ಜರ್ಮನಿಯ ವಿಜ್ಞಾನಿಗಳು ಪತ್ತೆ ಮಾಡಿದ್ದು, ಇದು ವಿಶ್ವದ ಅತಿ ಚಿಕ್ಕದಾದ ಸರೀಸೃಪಗಳಿಗೆ ಸ್ಪರ್ಧೆ ನೀಡುವಂತಿದೆ ಎಂದು ಹೇಳಿದ್ದಾರೆ.
ಅಂತರರಾಷ್ಟ್ರೀಯ ಸಂಶೋಧಕರ ತಂಡವೊಂದು ಈ ಹೊಸ ಪ್ರಬೇಧವನ್ನು ವರ್ಗೀಕರಿಸಿ, ಅದಕ್ಕೆ ಬ್ರುಕೇಶಿಯಾ ನಾನಾ ಎಂದು ಹೆಸರಿಟ್ಟಿದೆ. ಈ ತಂಡದ ಭಾಗವಾಗಿರುವ ವಿಜ್ಞಾನಿ ಫ್ರಾಂಕ್ ಗ್ಲಾವ್, ‘ಗಂಡು ಮಾದರಿಯ ಹೊಸ ಪ್ರಭೇದದ ದೇಹವು ಕೇವಲ 13.5 ಮಿಲಿಮೀಟರ್ ಉದ್ದವಿದೆ (1/2 ಇಂಚಿಗಿಂತ ಸ್ವಲ್ಪ ಹೆಚ್ಚು) ಎಂದು ಹೇಳಿದರು. ಈ ಹಿಂದೆ ಪತ್ತೆಯಾಗಿ ದಾಖಲೆ ಸೃಷ್ಟಿಸಿದ್ದ ಬ್ರೂಕೆಸಿಯಾ ಕುಟುಂಬದ ಮತ್ತೊಂದು ತಳಿಯ ಅಳತೆಗಿಂತ ಇದು ಕನಿಷ್ಠ 1.5 ಮಿ.ಮೀ ಚಿಕ್ಕದಾಗಿದೆ ಎಂದು ಅವರು ಹೇಳಿದರು.
ಇಲ್ಲಿನ ಮ್ಯೂನಿಕ್‌ನಲ್ಲಿರುವ ಬವೇರಿಯನ್ ರಾಜ್ಯ ಪ್ರಾಣಿಶಾಸ್ತ್ರ ಸಂಗ್ರಹಾಲಯದ ಸರೀಸೃಪಗಳ ತಜ್ಞ ಫ್ರಾಂಕ್ ಗ್ಲಾವ್, ‘2012 ರಲ್ಲಿ ಕೈಗೊಂಡಿದ್ದ ಚಾರಣದ ವೇಲೆ ಸ್ಥಳೀಯ ಮಾರ್ಗದರ್ಶಿಯೊಬ್ಬ ಪರ್ವತದ ಪಕ್ಕದಲ್ಲಿ ಚಿಕ್ಕದಾದ ಗಂಡು ಮತ್ತು ಸ್ವಲ್ಪ ದೊಡ್ಡದಾದ ಹೆಣ್ಣು ಜಾತಿಯ ಗೋಸುಂಬೆಯನ್ನು ಪತ್ತೆ ಮಾಡಿದ್ದ‘ ಎಂದು ಹೇಳಿದರು.
‘ಇಂಥ ಚಿಕ್ಕದಾದ ಗೋಸುಂಬೆ ಪ್ರಭೇದಗಳನ್ನು ಹುಡುಕಬೇಕೆಂದರೆ, ನಿಮ್ಮ ಮೊಣಕಾಲುಗಳನ್ನು ನೆಲಕ್ಕೆ ಒತ್ತಿ ಕುಳಿತು, ಸಣ್ಣ ಕಣ್ಣು ಮಾಡಿಕೊಂಡೇ ಹುಡುಕಬೇಕು. ಅವು ಅಷ್ಟು ಸಣ್ಣದಾದ ಪ್ರಭೇದಗಳು‘ ಎಂದು ಫ್ರಾಂಕ್ ಸುದ್ದಿ ಸಂಸ್ಥೆಗೆ ದೂರವಾಣಿ ಮೂಲಕ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.