ADVERTISEMENT

ತಿರುಪತಿ ಲಡ್ಡು ಪ್ರಕರಣ: ಎಸ್ಐಟಿಯಿಂದ ತನಿಖೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 16:05 IST
Last Updated 23 ಜನವರಿ 2026, 16:05 IST
.
.   

ಹೈದರಾಬಾದ್‌: ತಿರುಪತಿ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪ ಬಳಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್‌ ನೇಮಿಸಿರುವ ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡವು (ಎಸ್‌ಐಟಿ) ಪೂರ್ಣಗೊಳಿಸಿದೆ.

12 ರಾಜ್ಯಗಳಲ್ಲಿ ಸತತ 15 ತಿಂಗಳು ತನಿಖೆ ನಡೆಸಿರುವ ತನಿಖಾ ತಂಡವು, ನೆಲ್ಲೂರ್‌ ಎಸಿಬಿ ಕೋರ್ಟ್‌ನಲ್ಲಿ ಶುಕ್ರವಾರ ಅಂತಿಮ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಉತ್ತರಾಖಂಡದ ಭೋಲೆ ಬಾಬಾ ಸಾವಯವ ಡೇರಿ ನಿರ್ದೇಶಕರಾದ ಪೋಮಿಲ್‌ ಜೈನ್‌ ಮತ್ತು ವಿಪಿನ್‌ ಜೈನ್‌ ಅವರನ್ನು ಪ್ರಕರಣದ ಪ್ರಮುಖ ಆರೋಪಿಗಳನ್ನಾಗಿಸಲಾಗಿದೆ. ದೋಷಾರೋಪ ಪಟ್ಟಿಯಲ್ಲಿ 36 ಆರೋಪಿಗಳ ಹೆಸರನ್ನು ಪಟ್ಟಿ ಮಾಡಲಾಗಿದ್ದು, ಅಷ್ಟೂ ಜನರನ್ನು ಬಂಧಿಸಲಾಗಿದೆ. ಈ ಪೈಕಿ ಮೂವರು ಜಾಮೀನು ಲಭ್ಯವಾಗದೆ ನ್ಯಾಯಾಂಗ ಬಂಧನದಲ್ಲಿದ್ದಾರೆ.

ADVERTISEMENT

ಮಾಜಿ ಪ್ರಧಾನ ವ್ಯವಸ್ಥಾಪಕರು ಸೇರಿದಂತೆ ಟಿಟಿಡಿ ಹಿರಿಯ ಅಧಿಕಾರಿಗಳು ನೆಲ್ಲೋರ್‌ ಕೇಂದ್ರೀಯ ಕಾರಾಗೃಹದಲ್ಲಿದ್ದಾರೆ. ಜೊತೆಗೆ ಟಿಟಿಡಿ ಮಾಜಿ ಮುಖ್ಯಸ್ಥರ ನಿಕಟವರ್ತಿ ಚಿನ್ನ ಅಪ್ಪಣ್ಣ ಮತ್ತು ಅಜಯ್‌ ಕುಮಾರ್‌ ಸುಗಂಧ ಅವರೂ ಜೈಲಿನಲ್ಲಿದ್ದಾರೆ. ಹಲವು ಡೇರಿಗಳ ಮಾಲೀಕರಿಗೆ ಷರತ್ತುಬದ್ಧ ಜಾಮೀನು ಲಭಿಸಿದ್ದು, ನಿಗದಿತ ದಿನಾಂಕಗಳಂದು ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ.

ಆರೋಪಿಗಳು ಹಸುವಿನ ಶುದ್ಧ ತುಪ್ಪದ ಬದಲಿಗೆ ಕೋಲ್ಕತ್ತದ ಬ್ಯೂಜ್‌ ಬಡ್ಜ್‌ ಕಂಪನಿಯಿಂದ ಪಡೆದ ಪಾಮ್‌ ಆಯಿಲ್‌, ಪಾಮ್‌ ಕರ್ನಲ್‌ ಎಣ್ಣೆ ಮತ್ತು ಪಾಮೊಲಿನ್‌ನಂತಹ ಕಲಬೆರಕೆ ವಸ್ತುಗಳನ್ನು ಬಳಸಿದ್ದಾರೆ. ಈ ವಸ್ತುಗಳನ್ನು ಅಲ್ಪ ಪ್ರಮಾಣದ ಶುದ್ಧ ತುಪ್ಪ, ಬೀಟಾ–ಕೆರೋಟಿನ್‌, ಅಸಿಟಿಕ್‌ ಆ್ಯಸಿಡ್‌ ಎಸ್ಟರ್‌ ಮತ್ತು ಸಿಂಥೆಟಿಕ್‌ ತುಪ್ಪದ ಸುವಾಸನೆಯಂತಹ ರಾಸಾಯನಿಕಗಳೊಂದಿಗೆ ಮಿಶ್ರಣ ಮಾಡಲಾಗುತ್ತಿತ್ತು ಎಂದು ತನಿಖೆಯಲ್ಲಿ ಗೊತ್ತಾಗಿದೆ. 

‘ಕಳೆದ ವರ್ಷ ಫೆಬ್ರುವರಿಯಿಂದ ಬಂಧನದಲ್ಲಿರುವ ಪೋಮಿಲ್‌ ಜೈನ್‌ ಮತ್ತು ವಿಪಿನ್ ಜೈನ್, ಉತ್ತರಾಖಂಡದ ರೂರ್ಕಿ ಬಳಿಯ ಭಗವಾನ್‌ಪುರದಲ್ಲಿರುವ ತಮ್ಮ ಡೇರಿ ಘಟಕದಲ್ಲಿ ಕಲಬೆರಕೆ ತುಪ್ಪ ತಯಾರಿಸುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ.

ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್‌ 2024ರ ಅಕ್ಟೋಬರ್‌ನಲ್ಲಿ ಎಸ್‌ಐಟಿ ರಚಿಸಿತ್ತು.  ಐವರು ಸದಸ್ಯರ ತನಿಖಾ ತಂಡವು ಇಬ್ಬರು ಸಿಬಿಐ ಅಧಿಕಾರಿಗಳನ್ನು ಒಳಗೊಂಡಿದೆ.

Highlights - ತನಿಖಾ ತಂಡ ಹೇಳಿದ್ದೇನು? *ತುಪ್ಪದ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲ *ಖಾಸಗಿ ಡೇರಿಗಳಿಂದ ಟಿಟಿಡಿ ಮಾನದಂಡಗಳ ಕಡೆಗಣನೆ *2019ರಿಂದ 2024ರವರೆಗೆ ಹಾಲು ಬಳಸದೆಯೇ ತುಪ್ಪ ತಯಾರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.