ADVERTISEMENT

ಹೈದರಾಬಾದ್‌ ನಿಜಾಮ ವಂಶಸ್ಥ ಮುಕರ‍್ರಮ್ ಜಾಹ್‌ ಇಸ್ತಾಂಬುಲ್‌ನಲ್ಲಿ ನಿಧನ

ಪಿಟಿಐ
Published 15 ಜನವರಿ 2023, 11:12 IST
Last Updated 15 ಜನವರಿ 2023, 11:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹೈದರಾಬಾದ್: 8ನೇ ನಿಜಾಮ ಎಂದೇ ಕರೆಯಲಾಗುತ್ತಿದ್ದ, ಹೈದರಾಬಾದ್‌ನ ನಿಜಾಮ ವಂಶಸ್ಥ ಮುಕರ‍್ರಮ್ ಜಾಹ್ (89) ಅವರು ಟರ್ಕಿಯೆದ ಇಸ್ತಾಂಬುಲ್‌ನಲ್ಲಿ ಶನಿವಾರ ನಿಧನರಾದರು.

‘ನವಾಬ್ ಮೀರ್‌ ಬರ್ಕತ್ ಅಲಿ ಖಾನ್‌ ವಾಲಾಶನ್ ಮುಕರ‍್ರಮ್ ಜಾಹ್‌ ಬಹದೂರ್‌ ಅವರು ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ’ ಎಂದು ಅವರ ಕಚೇರಿಯು ಭಾನುವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

‘ಅವರ ಇಚ್ಛೆಯಂತೆ, ಮುಕರ‍್ರಮ್‌ ಅವರ ಅಂತ್ಯಕ್ರಿಯೆಯನ್ನು ತಾಯ್ನಾಡಿನಲ್ಲಿಯೇ ನೆರವೇರಿಸಲಾಗುತ್ತದೆ. ಅವರ ಪಾರ್ಥಿವ ಶರೀರದೊಂದಿಗೆ ಅವರ ಮಕ್ಕಳು ಜ.17ರಂದು ಹೈದರಾಬಾದ್‌ಗೆ ಪ್ರಯಾಣಿಸುವರು’ ಎಂದೂ ಪ್ರಕಟಣೆ ತಿಳಿಸಿದೆ.

ADVERTISEMENT

‘ಪಾರ್ಥಿವ ಶರೀರವನ್ನು ಹೈದರಾಬಾದ್‌ನಲ್ಲಿರುವ ಚೌಮೊಹಲ್ಲಾ ಅರಮನೆಗೆ ತೆಗೆದುಕೊಂಡು ಹೋಗಿ, ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಗುವುದು. ನಂತರ, ಅವರ ಪೂರ್ವಜರ (ಆಸಫ್‌ ಜಾಹಿ ರಾಜವಂಶ) ಸಮಾಧಿಗಳು ಇರುವ ಸ್ಥಳದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಗುವುದು’ ಎಂದು ತಿಳಿಸಿದೆ.

1933ರಲ್ಲಿ ಜನಿಸಿದ್ದ ಅವರು, ನಂತರ ಟರ್ಕಿಯೆಗೆ ವಲಸೆ ಹೋಗಿ, ನಂತರ ಅಲ್ಲಿಯೇ ವಾಸಿಸುತ್ತಿದ್ದರು. ಮೀರ್ ಹಿಮಾಯತ್ ಅಲಿ ಖಾನ್ (ಅಜಂ ಜಾಹ್ ಬಹದೂರ್‌ ಎಂದೂ ಕರೆಯಲಾಗುತ್ತಿತ್ತು), ಮುಕರ‍್ರಮ್‌ ಅವರ ತಂದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.