ADVERTISEMENT

ಮತದಾರರ ಪಟ್ಟಿಗೆ ನಕಲಿ ಹೆಸರುಗಳ ಸೇರ್ಪಡೆ: EC, ಬಿಜೆಪಿ ವಿರುದ್ಧ ಟಿಎಂಸಿ ಕಿಡಿ

ಪಿಟಿಐ
Published 22 ಫೆಬ್ರುವರಿ 2025, 13:16 IST
Last Updated 22 ಫೆಬ್ರುವರಿ 2025, 13:16 IST
ಟಿಎಂಸಿ ಮತ್ತು ಬಿಜೆಪಿ
ಟಿಎಂಸಿ ಮತ್ತು ಬಿಜೆಪಿ   

ಕೋಲ್ಕತ್ತ: ಪಶ್ಚಿಮ ಬಂಗಾಳದ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಗೆ ನಕಲಿ ಹೆಸರುಗಳನ್ನು ಸೇರ್ಪಡೆಗೊಳಿಸಲು ಬಿಜೆಪಿಯೊಂದಿಗೆ ಕೆಲವು ಚುನಾವಣಾ ಆಯೋಗದ ಅಧಿಕಾರಿಗಳು ಶಾಮೀಲು ಆಗಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಆರೋಪಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಟಿಎಂಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್, ಹೆಚ್ಚಿನದಾಗಿ ರಾಜ್ಯದ ಗಡಿ ಪ್ರದೇಶಗಳಲ್ಲಿ ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸದೆಯೇ ಹೊಸ ಹೆಸರುಗಳನ್ನು ಸೇರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರ್ ವಿಧಾನಸಭೆಯ ವ್ಯಾಪ್ತಿಯ ಚಂಪಹತಿ ಪ್ರದೇಶದಲ್ಲಿ ಮತದಾರರ ಪಟ್ಟಿಯಲ್ಲಿ ಮತದಾರರ ಸಂಖ್ಯೆ ಏರಿಕೆಯಾಗಿದೆ ಎಂಬ ವರದಿಗಳನ್ನು ಉಲ್ಲೇಖಿಸಿದ ಘೋಷ್‌, ಅನಧಿಕೃತ ಮತದಾರರನ್ನು ಪತ್ತೆಹಚ್ಚಿದ ಕೀರ್ತಿ ಸ್ಥಳೀಯ ಆಡಳಿತ ಮತ್ತು ಪೊಲೀಸರಿಗೆ ಸಲ್ಲುತ್ತದೆಯೇ ಹೊರತು ಸರಿಯಾಗಿ ಪರಿಶೀಲನೆ ನಡೆಸದೆ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲು ಅವಕಾಶ ನೀಡಿದ ಚುನಾವಣಾ ಆಯೋಗಕ್ಕಲ್ಲ ಎಂದು ಕಿಡಿಕಾರಿದ್ದಾರೆ.

ADVERTISEMENT

ರಾಜ್ಯದಲ್ಲಿ ಅಧಿಕಾರ ಪಡೆಯಲು ಪದೇ ಪದೇ ವಿಫಲವಾಗುತ್ತಿರುವ ಹಿನ್ನೆಲೆ ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕೆಂದು ಬಿಜೆಪಿಯು ಚುನಾವಣಾ ಆಯೋಗದೊಂದಿಗೆ ಶಾಮೀಲಾಗಿದೆ. ಈ ಮೂಲಕ ಮತದಾರರ ಪಟ್ಟಿಯಲ್ಲಿ ನಕಲಿ ಹೆಸರುಗಳನ್ನು ಸೇರಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಆದರೆ ಈ ಆರೋಪಗಳನ್ನು ತಳ್ಳಿ ಹಾಕಿರುವ ಬಿಜೆಪಿ, ಅಧಿಕಾರ ಕಳೆದುಕೊಳ್ಳುವ ನಿರಾಸೆಯಿಂದಾಗಿ ಈ ರೀತಿಯ ಹೇಳಿಕೆಗಳನ್ನು ಟಿಎಂಸಿ ನೀಡುತ್ತಿದೆ ಎಂದು ವ್ಯಂಗ್ಯವಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.