ADVERTISEMENT

ಮಮತಾ ಬಗ್ಗೆ ಟ್ವೀಟ್: ವಿಜಯವರ್ಗಿಯಾ ವಿರುದ್ಧ ಟಿಎಂಸಿ ಕಿಡಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 0:59 IST
Last Updated 5 ಜನವರಿ 2021, 0:59 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ವಿರುದ್ಧ ತೃಣಮೂಲ ಕಾಂಗ್ರೆಸ್‌ ಪಕ್ಷದ (ಟಿಎಂಸಿ) ಮಹಿಳಾ ನಾಯಕಿಯರು ಕಿಡಿಕಾರಿದ್ದಾರೆ.

ಮಮತಾ ಅವರು ಹಳ್ಳಿಯೊಂದರಲ್ಲಿ ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲಿ ತೆಗೆದ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದ ವಿಜಯವರ್ಗಿಯಾ, ‘ದೀದಿ (ಮಮತಾ) ತಾವು 5 ತಿಂಗಳ ಬಳಿಕ ಮಾಡಲಿರುವ ಕೆಲಸವನ್ನು ಈಗಲೇ ಆರಂಭಿಸಿದ್ದಾರೆ’ ಎಂದು ಬರೆದುಕೊಂಡಿದ್ದರು. ಮಮತಾ ಕಳೆದವಾರ ಬಿರ್ಭುಮ್‌ ಜಿಲ್ಲೆಯಿಂದ ಕೋಲ್ಕತ್ತಾಗೆ ವಾಪಸ್‌ಆಗುವ ವೇಳೆ ಮಾರ್ಗಮಧ್ಯೆ ಬಲ್ಲವಪುರ ಗ್ರಾಮದಲ್ಲಿ ಕೆಲಸಮಯ ಉಳಿದಿದ್ದರು. ಈ ವೇಳೆ ತೆಗೆಯಲಾಗಿದ್ದ ಚಿತ್ರವನ್ನು ವಿಜಯವರ್ಗಿಯಾ ಹಂಚಿಕೊಂಡಿದ್ದಾರೆ. ಏಪ್ರಿಲ್‌–ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ವಿಜಯವರ್ಗಿಯಾ ಟ್ವೀಟ್‌ಗೆ ತಕ್ಷಣವೇ ಪ್ರತಿಕ್ರಿಯಿಸಿರುವ ಟಿಎಂಸಿ ಸಂಸದೆ ಕಕೋಲಿ ಘೋಷ್‌ ದಸ್ತೀದಾರ್‌, ಹೆಂಗಸರು ಅಡುಗೆಮನೆಯಲ್ಲಿಯೇ ಇರಬೇಕು ಎನ್ನುವ ಬಿಜೆಪಿಯ ‘ಮಹಿಳಾ ವಿರೋಧಿ’ ಮನಸ್ಥಿತಿಯಿಂದ ದೇಶವು ತುಂಬಿದೆ ಎಂದು ಆರೋಪಿಸಿದ್ದಾರೆ. ‘ನೀವು ಮಹಿಳೆಯಾಗಿದ್ದಾರೆ ಮತ್ತು ಸಕ್ರಿಯ ರಾಜಕೀಯದಲ್ಲಿ ಪಾಲ್ಗೊಳ್ಳಬೇಕು ಎಂಬ ಆಕಾಂಕ್ಷೆ ಹೊಂದಿದ್ದರೆ, ನನೆಪಿಡಿ– ಮಹಿಳೆಯರನ್ನು ಅಡುಗೆ ಮನೆಗೆ ವಾಪಸ್‌ ಕಳುಹಿಸುವ ಯೋಜನೆಯಲ್ಲಿರುವ ಬಿಜೆಪಿಯ ಇಂತಹ ‘ಸ್ತ್ರೀ ವಿರೋಧಿ’ ಮನಸ್ಥಿತಿಯವರಿಂದ ದೇಶವು ತುಂಬಿಕೊಂಡಿದೆ’ ಎಂದು ಟ್ವೀಟ್‌ ಮೂಲಕ ತಿರುಗೇಟು ನೀಡಿದ್ದಾರೆ. ಮುಂದುವರಿದು, ‘ಕೈಲಾಶ್‌ ವಿಜಯವರ್ಗಿಯಾ ಅವರ ಕುಟುಂಬದಲ್ಲಿರುವ ಮಹಿಳೆಯರಿಗೆ ಆಗಿರುವ ಗೌರವದ ಕೊರತೆಯನ್ನು ಊಹಿಸಲೂ ಸಾಧ್ಯವಿಲ್ಲ’ ಎಂದೂ ಕುಟುಕಿದ್ದಾರೆ.

ADVERTISEMENT

ಸಚಿವೆ ಶಾಂಶಿ ಪಾಂಚಾ ಅವರು, ‘ಬಿಜೆಪಿ ತನ್ನ ನಿಜವಾದ ಬಣ್ಣವನ್ನು ಮತ್ತೊಮ್ಮೆ ತೋರಿಸಿದೆ! ದೇಶದಲ್ಲಿ ಸದ್ಯ ಇರುವ ಏಕೈಕ ಮಹಿಳಾ ಮುಖ್ಯಮಂತ್ರಿಯ ಬಗ್ಗೆ ಅವರು ಯೋಚಿಸುವ ರೀತಿ ಇದು. ಅವರ (ಬಿಜೆಪಿ) ಆಡಳಿತದಲ್ಲಿ ನಮ್ಮ ಮಹಿಳೆಯರಿಗೆ ಸುರಕ್ಷತೆ ಸಿಗದು ಎಂಬುದರಲ್ಲಿ ಆಶ್ಚರ್ಯವೇ ಇಲ್ಲ. ಇನ್ನೊಮ್ಮೆ ಇಂತಹ ಸ್ತ್ರೀವಿರೋಧಿ ಹೇಳಿಕೆಯನ್ನು ನೀಡುವ ಮೊದಲು, ಇದೀಗ ನಿಮ್ಮ ನಾಯಕರಾಗಿರುವ ಚಾಯ್‌ವಾಲಾ ಅವರನ್ನು ನೆನಪಿಸಿಕೊಳ್ಳಿ' ಎಂದು ಚಾಟಿ ಬೀಸಿದ್ದಾರೆ.

ಸಂಸದೆ ನುಸ್ರತ್‌ ಜಹಾನ್‌ ಅವರು, 'ಶ್ರೀ ಕೈಲಾಶ್‌ ವಿಜಯವರ್ಗಿಯಾ ಅವರ ಹೇಳಿಕೆಯು ಸಂಪೂರ್ಣವಾಗಿ ಸ್ತ್ರೀ ವಿರೋಧಿಯಾಗಿದೆ! ಈ ಮೂಲಕ ತಮ್ಮ ಕುಟುಂಬಕ್ಕಾಗಿ ಅಡುಗೆ ಮಾಡುವ ಆಕಾಂಕ್ಷೆಯುಳ್ಳ ಪ್ರತಿಯೊಬ್ಬ ಮಹಿಳೆಯನ್ನು ಬಿಜೆಪಿ ಅವಮಾನಿಸಿ, ಮಿತಿ ಮೀರಿದೆ. ಮಮತಾ ಬ್ಯಾನರ್ಜಿ ಅವರು ಸದ್ಯ ದೇಶದಲ್ಲಿರುವ ಏಕೈಕ ಮಹಿಳಾ ಮುಖ್ಯಮಂತ್ರಿ. ಮತ್ತೊಮ್ಮೆ ಅವರನ್ನು ಗುರಿಮಾಡಿ ಅವಹೇಳನ ಮಾಡಲಾಗಿದೆ. ಇದು ನಾಚಿಕೆಗೇಡು’ ಎಂದು ಕಿಡಿ ಕಾಡಿದ್ದಾರೆ.

ಆದರೆ, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷೆ ಅಗ್ನಿಮಿತ್ರಾ ಪೌಲ್‌ ಅವರು, ವಿಜಯವರ್ಗಿಯಾ ಅವರ ಟ್ವೀಟ್‌ನಲ್ಲಿ ಮಹಿಳಾ ವಿರೋಧಿ ಎನ್ನುವಂತಹದ್ದೇನಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

'ಅಡುಗೆ ಮಾಡುವುದು ಕೆಳಮಟ್ಟದ ಕೆಲಸ ಅಲ್ಲ. ನಮ್ಮ ತಾಯಂದಿರು, ಅಜ್ಜಿಯಂದಿರು ಕುಟುಂಬಕ್ಕಾಗಿ ಅಡುಗೆ ಮಾಡಿದ್ದಾರೆ. ಲಕ್ಷಾಂತರ ಮಹಿಳೆಯರು ಗೃಹಿಣಿಯರಾಗಿ, ತಮ್ಮವರಿಗಾಗಿ ಉತ್ಸಾಹದಿಂದ ಅಡುಗೆ ಮಾಡಿದ್ದಾರೆ. ಸಾವಿರಾರು ಪುರುಷ ಬಾಣಸಿಗರು ತಮ್ಮ ವೃತ್ತಿಯ ಬಗ್ಗೆ ಹೆಮ್ಮೆ ಹೊಂದಿದ್ದಾರೆ. ಆ ಟ್ವೀಟ್ ಅನರ್ಥದ ಅಥವಾ ಸ್ತ್ರೀ ವಿರೋಧಿಯಾಗಲು ಹೇಗೆ ಸಾಧ್ಯ' ಎಂದು ಪ್ರಶ್ನಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.