ADVERTISEMENT

ಕಾವೇರಿ, ಉಪನದಿಗಳ ಮಾಲಿನ್ಯ ತಡೆಯಲು ಸಮಿತಿ ರಚನೆ: ತಮಿಳುನಾಡು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 12:28 IST
Last Updated 9 ಅಕ್ಟೋಬರ್ 2021, 12:28 IST
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಪ್ರವಾಸಿಗರು ಪೂಜಾ ಸಾಮಗ್ರಿ ಮತ್ತು ಬಟ್ಟೆಗಳನ್ನು ನದಿಗೆ ಎಸೆದು ನದಿ ಕಲುಷಿತಗೊಂಡಿರುವ ದೃಶ್ಯ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಪ್ರವಾಸಿಗರು ಪೂಜಾ ಸಾಮಗ್ರಿ ಮತ್ತು ಬಟ್ಟೆಗಳನ್ನು ನದಿಗೆ ಎಸೆದು ನದಿ ಕಲುಷಿತಗೊಂಡಿರುವ ದೃಶ್ಯ.   

ಚೆನ್ನೈ: ಕಾವೇರಿ ನದಿ ಮತ್ತು ಅದರ ಉಪನದಿಗಳಿಗೆ ಹಾನಿಕಾರಕ ತ್ಯಾಜ್ಯ ಸೇರ್ಪಡೆಯಾಗುತ್ತಿರುವ ಸಮಸ್ಯೆ ಪರಿಶೀಲಿಸಲು ಐದು ಸಮಿತಿಗಳನ್ನು ರಚಿಸಲಾಗಿದೆ ಎಂದು ತಮಿಳುನಾಡು ಸರ್ಕಾರ ಶನಿವಾರ ಹೇಳಿದೆ.

ಜಲಸಂಪನ್ಮೂಲಗಳನ್ನು ರಕ್ಷಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಮಾಲಿನ್ಯದ ಮಟ್ಟ ನಿರ್ಧರಿಸಲು ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ನೀರಿನ ಮಾದರಿಗಳನ್ನು ಹಲವಾರು ಪ್ರದೇಶಗಳಿಂದ ಸಂಗ್ರಹಿಸಲಾಗಿದೆ ಎಂದು ರಾಜ್ಯ ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವ ಶಿವ ವಿ. ಮೆಯ್ಯಾನಾಥನ್ ಹೇಳಿದರು.

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಕಾವೇರಿ ಸೇರಿದಂತೆ ಇತರ ನದಿಗಳ ಮಾಲಿನ್ಯ ತಡೆಗಟ್ಟಲು ರಾಜ್ಯ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈರೋಡ್, ಕುಮಾರಪಾಳ್ಯಂ, ಪಳ್ಳಿಪಾಳ್ಯಂ, ಕರೂರ್ ಮತ್ತು ತಿರುಪುರ್‌ನಲ್ಲಿನ ಡೈಯಿಂಗ್ ಘಟಕಗಳಿಂದ ಸಂಸ್ಕರಿಸದ ತ್ಯಾಜ್ಯಗಳನ್ನು ಕಾವೇರಿ ಮತ್ತು ಅದರ ಉಪನದಿಗಳಿಗೆ ಬಿಡಲಾಗಿದೆಯೇ ಎಂಬುದನ್ನು ಪರಿಶೀಲಿಸಲು ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ (ಟಿಎನ್‌ಪಿಸಿಬಿ) ಒಳಗೊಂಡ ಐದು ಸಮಿತಿಗಳನ್ನು ಅ.6 ರಂದು ರಚಿಸಲಾಗಿದೆ ಎಂದು ಸಚಿವರು ಹೇಳಿದರು.

ADVERTISEMENT

ಸಮಿತಿಗಳು ಈ ಪ್ರದೇಶಗಳಲ್ಲಿನ ಘಟಕಗಳನ್ನು ಪರಿಶೀಲಿಸುತ್ತಿವೆ. ಇದರ ಜೊತೆಯಲ್ಲಿ, ಟಿಎನ್‌ಪಿಸಿಬಿ ಮತ್ತು ಐಐಟಿ(ಎಂ) ತಂಡದ ಎಂಜಿನಿಯರ್‌ಗಳು ಅ.9ರಂದು ಮೆಟ್ಟೂರಿನಿಂದ ಮೈಲಾಡುತುರೈವರೆಗೆ ವಿವಿಧ ಸ್ಥಳಗಳಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಐಐಟಿ ಮದ್ರಾಸ್ ನಡೆಸಿದ ಅಧ್ಯಯನದಲ್ಲಿ ಕಾವೇರಿ ನದಿ ಔಷಧಿಯ ತ್ಯಾಜ್ಯ, ಪ್ಲಾಸ್ಟಿಕ್, ಭಾರ ಲೋಹಗಳು ಮತ್ತು ಕೀಟನಾಶಕಗಳಿಂದ ಕಲುಷಿತವಾಗಿರುವುದು ಕಂಡುಬಂದಿದೆ ಎಂದರು.

ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಯುನೈಟೆಡ್‌ ಕಿಂಗ್‌ಡಮ್‌ ನೈಸರ್ಗಿಕ ಪರಿಸರ ಸಂಶೋಧನಾ ಮಂಡಳಿಯ ಜಂಟಿ ಅನುದಾನದಲ್ಲಿ ಈ ಅಧ್ಯಯನವು ನಡೆದಿದೆ. ಕಾವೇರಿ ನದಿಯ ಮಾಲಿನ್ಯವನ್ನು ತಡೆಗಟ್ಟಲು ಮತ್ತು ಜಲಮೂಲಗಳನ್ನು ರಕ್ಷಿಸಲು ಐಐಟಿ (ಎಂ) ಸೇರಿದಂತೆ ತಜ್ಞರ ಸಲಹೆ ಪಡೆದು, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.