ADVERTISEMENT

ಡಿಸೆಂಬರ್ 1ರಿಂದ ತಂಬಾಕು ಉತ್ಪನ್ನಗಳಿಗೆ ಆರೋಗ್ಯ ಎಚ್ಚರಿಕೆ ಜೊತೆ ಹೊಸ ಚಿತ್ರ

ಪಿಟಿಐ
Published 29 ಜುಲೈ 2022, 9:06 IST
Last Updated 29 ಜುಲೈ 2022, 9:06 IST
   

ನವದೆಹಲಿ: ಡಿಸೆಂಬರ್ 1ರ ನಂತರ ತಯಾರಿಸಿದ, ಆಮದು ಮಾಡಿದ ತಂಬಾಕು ಉತ್ಪನ್ನಗಳ ಪ್ಯಾಕ್ ಮೇಲೆ ‘ತಂಬಾಕು ಸೇವನೆ ಅತ್ಯಂತ ನೋವಿನ ಸಾವಿಗೆ ಕಾರಣವಾಗುತ್ತದೆ’ಎಂಬ ಪಠ್ಯದ ಆರೋಗ್ಯ ಎಚ್ಚರಿಕೆಯೊಂದಿಗೆ ಹೊಸ ಚಿತ್ರವನ್ನು ಪ್ರದರ್ಶಿಸಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಚಿತ್ರವು ಈ ವರ್ಷದ ಡಿಸೆಂಬರ್ 1 ರಿಂದ ಪ್ರಾರಂಭವಾಗಿ ಒಂದು ವರ್ಷದ ಅವಧಿಗೆ ಮಾನ್ಯವಾಗಿರುತ್ತದೆ.

ಅಲ್ಲದೆ, ಸಚಿವಾಲಯವು ಸೂಚಿಸಿರುವ ಹೊಸ ಆರೋಗ್ಯ ಎಚ್ಚರಿಕೆಗಳ ಪ್ರಕಾರ, ಡಿಸೆಂಬರ್ 1, 2023 ರ ನಂತರ ತಯಾರಿಸಲಾದ, ಆಮದು ಮಾಡಿದ ಅಥವಾ ಪ್ಯಾಕ್ ಮಾಡಲಾದ ತಂಬಾಕು ಉತ್ಪನ್ನಗಳ ಪ್ಯಾಕ್ ಮೇಲೆ ‘ತಂಬಾಕು ಬಳಕೆದಾರರು ಕಿರಿಯ ವಯಸ್ಸಿನಲ್ಲೇ ಸಾಯುತ್ತಾರೆ’ಎಂಬ ಪಠ್ಯದ ಆರೋಗ್ಯ ಎಚ್ಚರಿಕೆಯೊಂದಿಗೆ ಚಿತ್ರವನ್ನು ಪ್ರದರ್ಶಿಸಲಾಗುತ್ತದೆ.

ADVERTISEMENT

2022ರ ಜುಲೈ 21 ರಂದು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ (ಪ್ಯಾಕೇಜಿಂಗ್ ಮತ್ತು ಲೇಬಲಿಂಗ್) ನಿಯಮಗಳು, 2008ರ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಸಚಿವಾಲಯವು ಹೊಸ ಆರೋಗ್ಯ ಎಚ್ಚರಿಕೆಗಳನ್ನು ಅಳವಡಿಸಿಕೊಳ್ಳಲಾಗಿದೆ.

ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ (ಪ್ಯಾಕೇಜಿಂಗ್ ಮತ್ತು ಲೇಬಲಿಂಗ್) ಮೂರನೇ ತಿದ್ದುಪಡಿ ನಿಯಮಗಳು, 2022 ರ ಅಡಿಯಲ್ಲಿ ತಿದ್ದುಪಡಿ ಮಾಡಲಾದ ನಿಯಮಗಳು ಡಿಸೆಂಬರ್ 1, 2022 ರಿಂದ ಅನ್ವಯವಾಗುತ್ತವೆ.

19 ಭಾಷೆಗಳಲ್ಲಿ ಅಧಿಸೂಚನೆಯು ಈ ವೆಬ್‌ಸೈಟ್‌ಗಳಲ್ಲಿ ಲಭ್ಯವಿದೆ: http://www.mohfw.gov.in"www.mohfw.gov.in ಮತ್ತು http://ntcp.nhp.gov.in"ntcp.nhp.gov.in

ಸಿಗರೇಟ್ ಅಥವಾ ಯಾವುದೇ ತಂಬಾಕು ಉತ್ಪನ್ನಗಳ ತಯಾರಿಕೆ, ಪೂರೈಕೆ, ಆಮದು ಅಥವಾ ವಿತರಣೆಯಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ತೊಡಗಿಸಿಕೊಂಡಿರುವ ಯಾವುದೇ ವ್ಯಕ್ತಿ ಎಲ್ಲಾ ತಂಬಾಕು ಉತ್ಪನ್ನಗಳ ಪ್ಯಾಕೇಜ್‌ಗಳ ಮೇಲೆ ಸೂಚಿಸಿದಂತೆ ನಿರ್ದಿಷ್ಟಪಡಿಸಿದ ಆರೋಗ್ಯ ಎಚ್ಚರಿಕೆಗಳನ್ನು ಮುದ್ರಿಸಬೇಕು ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಮಾರ್ಗಸೂಚಿಗಳ ಉಲ್ಲಂಘನೆಯು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ನಿಯಂತ್ರಣ, ಉತ್ಪಾದನೆ, ಸರಬರಾಜು ಮತ್ತು ವಿತರಣೆ) ಕಾಯ್ದೆ, 2003 ರ ವಿಧಿ 20 ರಲ್ಲಿ ಸೂಚಿಸಿದಂತೆ ಜೈಲು ಶಿಕ್ಷೆ ಅಥವಾ ದಂಡದೊಂದಿಗೆ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಸರ್ಕಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.