ADVERTISEMENT

ಅಸ್ಸಾಂ–ಮೇಘಾಲಯದ ವಿವಾದಿತ ಗಡಿಯಲ್ಲಿ ಘರ್ಷಣೆ: 6 ಸಾವು

ಘಟನೆ ಖಂಡಿಸಿದ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್‌ ಸಂಗ್ಮಾ

ಪಿಟಿಐ
Published 22 ನವೆಂಬರ್ 2022, 15:07 IST
Last Updated 22 ನವೆಂಬರ್ 2022, 15:07 IST
ಘಟನಾ ಸ್ಥಳದಲ್ಲಿ ಮೃತದೇಹಗಳು ಬಿದ್ದಿರುವುದು –ಪಿಟಿಐ ಚಿತ್ರ 
ಘಟನಾ ಸ್ಥಳದಲ್ಲಿ ಮೃತದೇಹಗಳು ಬಿದ್ದಿರುವುದು –ಪಿಟಿಐ ಚಿತ್ರ    

ಗುವಾಹಟಿ/ಶಿಲ್ಲಾಂಗ್‌: ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳ ವಿವಾದಿತ ಗಡಿ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ನಾಗರಿಕರ ನಡುವೆ ನಡೆದ ಘರ್ಷಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸೇರಿ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ.

‘ಮರದ ದಿಮ್ಮಿಗಳನ್ನು ಮೇಘಾಲಯದ ಪಶ್ಚಿಮ ಜೈಂತಿಯಾ ಹಿಲ್ಸ್‌ ಜಿಲ್ಲೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಟ್ರಕ್‌ ಅನ್ನು ಅರಣ್ಯ ಇಲಾಖೆ ಸಿಬ್ಬಂದಿ ನಮ್ಮ ಜಿಲ್ಲೆಗೆ ಸೇರಿದ ಮುಖ್ರು ಪ್ರದೇಶದಲ್ಲಿಮಂಗಳವಾರ ಮುಂಜಾನೆ 3 ಗಂಟೆ ಸುಮಾರಿಗೆ ತಡೆದು ತಪಾಸಣೆ ನಡೆಸಲು ಮುಂದಾಗಿದ್ದರು. ಈ ವೇಳೆ ಚಾಲಕ ಟ್ರಕ್‌ ಅನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಲು ಪ್ರಯತ್ನಿಸಿದ್ದ. ಆಗ ಅರಣ್ಯ ಇಲಾಖೆ ಸಿಬ್ಬಂದಿ ಟ್ರಕ್‌ನ ಟಯರಿಗೆ ಗುಂಡು ಹಾರಿಸಿ ಅದರಲ್ಲಿದ್ದವರ ಪೈಕಿ ಮೂವರನ್ನು ವಶಕ್ಕೆ ಪಡೆದಿದ್ದರು.ಕೆಲವರು ಪರಾರಿಯಾಗಿದ್ದರು’ ಎಂದು ಅಸ್ಸಾಂನ ಪಶ್ಚಿಮ ಕಾರ್ಬಿ ಆ್ಯಂಗ್‌ಲಾಂಗ್‌ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ ಇಮದಾದ್‌ ಅಲಿ ಹೇಳಿದ್ದಾರೆ.

‘ಅರಣ್ಯ ಇಲಾಖೆ ಸಿಬ್ಬಂದಿ ಝಿರಿಕೆಂಡಿಂಗ್‌ ಪೊಲೀಸ್‌ ಠಾಣೆಗೆ ಕರೆ ಮಾಡಿಘಟನೆ ಕುರಿತು ಮಾಹಿತಿ ನೀಡಿದ್ದರು. ಹೀಗಾಗಿ ಪೊಲೀಸರು ಸ್ಥಳಕ್ಕೆ ಹೋಗಿದ್ದರು. ಬೆಳಿಗ್ಗೆ 5 ಗಂಟೆ ಸುಮಾರಿಗೆ ಮೇಘಾಲಯದ ನಾಗರಿಕರು ಗುಂಪು ಕಟ್ಟಿಕೊಂಡು ಸ್ಥಳಕ್ಕೆ ಬಂದಿದ್ದರು. ಕತ್ತಿ ಸೇರಿದಂತೆ ಕೆಲ ಮಾರಕಾಸ್ತ್ರಗಳೂ ಅವರ ಬಳಿ ಇದ್ದವು.‍ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಸುತ್ತುವರಿದ ಗುಂಪು, ವಶಕ್ಕೆ ಪಡೆದಿರುವವರ ಬಿಡುಗಡೆಗೆ ಒತ್ತಾಯಿಸಿತ್ತು. ಸಿಬ್ಬಂದಿ ಮೇಲೆ ಹಲ್ಲೆ ನಡೆಸಲೂ ಮುಂದಾಗಿತ್ತು. ಹೀಗಾಗಿ ಪೊಲೀಸರು ಗುಂಡಿನ ದಾಳಿ ನಡೆಸಬೇಕಾಯಿತು’ ಎಂದು ಸಿಬ್ಬಂದಿಯ ಕ್ರಮ ಸಮರ್ಥಿಸಿಕೊಂಡಿದ್ದಾರೆ.

ADVERTISEMENT

ಘಟನೆ ಕುರಿತು ಸರಣಿ ಟ್ವೀಟ್‌ ಮಾಡಿರುವ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್‌ ಸಂಗ್ಮಾ, ‘ಅಸ್ಸಾಂ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಮ್ಮ ರಾಜ್ಯದೊಳಗೆ ಪ್ರವೇಶಿಸಿ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ’ ಎಂದು ದೂರಿದ್ದಾರೆ. ಇದನ್ನು ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಶರ್ಮಾ ಅವರಿಗೆ ಟ್ಯಾಗ್‌ ಮಾಡಿದ್ದಾರೆ. ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿಯು (ಎನ್‌ಪಿಪಿ) ಬಿಜೆಪಿಯ ಮಿತ್ರ ಪಕ್ಷವಾಗಿದೆ.

‘ರಾಜ್ಯದ ಪಶ್ಚಿಮ ಜೈಂತಿಯಾ ಹಿಲ್ಸ್‌ ಜಿಲ್ಲೆಯ ಮುಖ್ರೋಹ್‌ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೃತಪಟ್ಟವರ ಪೈಕಿ ಐವರು ಮೇಘಾಲಯದ ನಿವಾಸಿಗಳು. ನಮ್ಮ ಸರ್ಕಾರ ಈ ಘಟನೆಯನ್ನು ಖಂಡಿಸುತ್ತದೆ. ಈ ಅಮಾನವೀಯ ಕೃತ್ಯಕ್ಕೆ ಕಾರಣರಾಗಿರುವವರ ವಿರುದ್ಧ ಕಠಿಣ ಕ್ರಮ ಕೈ‌ಗೊಳ್ಳಲಿದೆ. ಮೃತರಿಗೆ ನ್ಯಾಯ ಒದಗಿಸುವ ಕೆಲಸವನ್ನೂ ಮಾಡಲಿದೆ’ ಎಂದು ಹೇಳಿದ್ದಾರೆ.

‘ರಾಜ್ಯದ ನಾಗರಿಕರು ಶಾಂತಿ ಕಾ‍ಪಾಡಬೇಕೆಂದು ಮನವಿ ಮಾಡುತ್ತೇನೆ. ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ಸರ್ಕಾರ ಕೈಗೊಳ್ಳಲಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.