ADVERTISEMENT

ಕಾಡಾನೆಗೆ ಕಠಿಣ ತರಬೇತಿ: ಪ್ರಾಣಿಪ್ರಿಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 4:45 IST
Last Updated 5 ಫೆಬ್ರುವರಿ 2019, 4:45 IST
ಆನೆ ‘ಚಿನ್ನತಂಬಿ’ಗೆ ತರಬೇತಿ ನೀಡುತ್ತಿರುವ ದೃಶ್ಯ   ಪ್ರಜಾವಾಣಿ ಚಿತ್ರ
ಆನೆ ‘ಚಿನ್ನತಂಬಿ’ಗೆ ತರಬೇತಿ ನೀಡುತ್ತಿರುವ ದೃಶ್ಯ   ಪ್ರಜಾವಾಣಿ ಚಿತ್ರ   

ಚೆನ್ನೈ: ಸ್ಥಳಾಂತರಿಸಲಾದ ಕಾಡಾನೆಗೆ ಕಠಿಣ ತರಬೇತಿ ನೀಡಲು ಮುಂದಾಗಿರುವ ತಮಿಳುನಾಡು ಸರ್ಕಾರದ ನಿರ್ಧಾರಕ್ಕೆ ವನ್ಯಜೀವಿ ಹಕ್ಕುಗಳ ಹೋರಾಟಗಾರರು ಮತ್ತು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

'20 ವರ್ಷದ ಆನೆ ಚಿನ್ನತಂಬಿಯನ್ನು ಕುಮ್ಕಿಯನ್ನಾಗಿ (ತರಬೇತಿ ಪಡೆದ ಆನೆ) ಮಾಡಲು ಸರ್ಕಾರ ಮುಂದಾಗಿದೆ. ಆನೆಗೆ ತರಬೇತಿ ನೀಡುವ ವೇಳೆ ತೀವ್ರ ಹಿಂಸೆ ನೀಡಲಾಗುತ್ತದೆ. ತರಬೇತಿ ಪ್ರಕ್ರಿಯೆಯೇ ತೀವ್ರ ಹಿಂಸಾತ್ಮಕವಾಗಿರುವುದರಿಂದ ಆನೆಗೆ ತುಂಬಾ ತೊಂದರೆಯಾಗುತ್ತದೆ’ ಎಂದು ಪ್ರಾಣಿ ಹಕ್ಕುಗಳ ಹೋರಾಟಗಾರ ಆ್ಯಂಟನಿ ರುಬಿನ್‌ ಹೇಳಿದ್ದಾರೆ.

ಆನೆ ಕಾರಿಡಾರ್‌ನ ಒತ್ತುವರಿ ಹೆಚ್ಚಾದ ಪರಿಣಾಮ ಆನೆಗಳು ಗ್ರಾಮದೊಳಗೆ ನುಗ್ಗುತ್ತಿವೆ. ಅದೇ ರೀತಿ, ಚಿನ್ನತಂಬಿ ಕೂಡ ಗ್ರಾಮಗಳಿಗೆ ನುಗ್ಗಿ ಗಲಾಟೆ ಮಾಡಿತ್ತು. ನಂತರ, ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಅದನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದರು.

ADVERTISEMENT

‘ಚಿನ್ನತಂಬಿಗೆ ರೇಡಿಯೊ ಕಾಲರ್‌ ಅಳವಡಿಸಲಾಗಿದ್ದು, ಅದರ ಚಲನವಲನದ ಮೇಲೆ ನಿಗಾ ಇಟ್ಟಿದ್ದೇವೆ. ಅದು ಮೊದಲಿನಂತೆ ಪುಂಡಾಟ ನಡೆಸುತ್ತಿಲ್ಲ. ಶಾಂತವಾಗಿ ವರ್ತಿಸುತ್ತಿದೆ’ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಹೇಳಿದ್ದಾರೆ.

‘ಯಾರನ್ನೋ ಕೊಲ್ಲಬೇಕು, ಮತ್ತಾರಿಗೋ ತೊಂದರೆ ಮಾಡಬೇಕು ಎಂಬುದು ಆನೆಗೆ ತಿಳಿದಿರುವುದಿಲ್ಲ. ಚಿನ್ನತಂಬಿ ಆಕ್ರಮಣಕಾರಿ ಮನೋಭಾವದ ಆನೆ. ಅದು ತನ್ನ ಜಾಗಕ್ಕೆ ಭೇಟಿ ನೀಡುತ್ತದೆ. ಆದರೆ, ಆ ಸ್ಥಳವನ್ನು ಜನ ಒತ್ತುವರಿ ಮಾಡಿಕೊಂಡಿರುವುದರಿಂದ ಸಮಸ್ಯೆಯಾಗಿದೆ’ ಎಂದು ರುಬಿನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.