ನವದೆಹಲಿ: ಲೈಂಗಿಕ ದೌರ್ಜನ್ಯದಿಂದಾಗಿ ಆಘಾತಕ್ಕೆ ಒಳಗಾಗಿರುವ ಮಗು, ಕಣ್ಣೀರು ಹಾಕುವುದನ್ನು ಹೊರತುಪಡಿಸಿ ಬೇರೆ ಏನೂ ಸಾಕ್ಷ್ಯ ನುಡಿಯುತ್ತಿಲ್ಲ ಎಂಬ ಅಂಶವು ಆರೋಪಿಗೆ ಶಿಕ್ಷೆ ನೀಡದೇ ಇರುವುದಕ್ಕೆ ಆಧಾರವಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
‘ಇಂತಹ ಪ್ರಕರಣಗಳಲ್ಲಿ, ಲಭ್ಯವಿರುವ ವೈದ್ಯಕೀಯ ಹಾಗೂ ಸಾಂದರ್ಭಿಕ ಸಾಕ್ಷ್ಯಗಳೇ ಆರೋಪಿಯು ತಪ್ಪಿತಸ್ಥ ಎಂದು ಘೋಷಿಸಲು ಆಧಾರವಾಗುತ್ತವೆ’ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.
‘ಸಂತ್ರಸ್ತ ಮಗುವಿನ ಹೇಳಿಕೆ ಇಲ್ಲದಿರುವ ಕಾರಣ, ತಪ್ಪಿತಸ್ಥ ವ್ಯಕ್ತಿಗೆ ಶಿಕ್ಷೆ ನೀಡಬಾರದು ಎಂಬಂತಹ ಯಾವುದೇ ಕಠಿಣ ನಿಯಮ ಇಲ್ಲ’ ಎಂದು ನ್ಯಾಯಮೂರ್ತಿಗಳಾದ ವಿಕ್ರಮನಾಥ ಹಾಗೂ ಸಂಜಯ್ ಕರೋಲ್ ಅವರು ಇದ್ದ ನ್ಯಾಯಪೀಠ ಹೇಳಿದೆ.
ರಾಜಸ್ಥಾನದಲ್ಲಿ 1986ರ ಮಾರ್ಚ್ 3ರಂದು 1ನೇ ತರಗತಿ ಬಾಲಕಿ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ, ಚತ್ರಾ ಎಂಬ ವ್ಯಕ್ತಿ ದೋಷಿ ಎಂದು ಘೋಷಿಸಿದ್ದ ಟೊಂಕ್‌ನ ನ್ಯಾಯಾಲಯ, ಆತನಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
ಇದನ್ನು ಪ್ರಶ್ನಿಸಿ ಚತ್ರಾ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ರಾಜಸ್ಥಾನ ಹೈಕೋರ್ಟ್, ಆತನಿಗೆ ವಿಧಿಸಿದ್ದ ಶಿಕ್ಷೆಯನ್ನು ರದ್ದುಪಡಿಸಿ 2013ರಲ್ಲಿ ಆದೇಶಿಸಿತ್ತು.
ಹೈಕೋರ್ಟ್‌ನ ಈ ಆದೇಶ ಪ್ರಶ್ನಿಸಿ ರಾಜಸ್ಥಾನ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿ ಪುರಸ್ಕರಿಸಿದ್ದ ಪೀಠವು, ಹೈಕೋರ್ಟ್ ಆದೇಶ ರದ್ದುಪಡಿಸಿ ಮಾರ್ಚ್ 18ರಂದು ತೀರ್ಪು ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.