ADVERTISEMENT

ನ್ಯಾಯಮಂಡಳಿಗಳಿಗೆ ನೇಮಕಾತಿ ನಡೆಸುವ ಶಿಫಾರಸು ನಿರ್ಲಕ್ಷ್ಯ: ‘ಸುಪ್ರೀಂ’ ಅತೃಪ್ತಿ

ನ್ಯಾಯಮಂಡಳಿಗಳಿಗೆ ನೇಮಕ: ಶಿಫಾರಸು ಪಟ್ಟಿಯನ್ನು ಸರ್ಕಾರ ಕಡೆಗಣಿಸಿದ ಆರೋಪ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 19:21 IST
Last Updated 15 ಸೆಪ್ಟೆಂಬರ್ 2021, 19:21 IST
   

ನವದೆಹಲಿ: ನ್ಯಾಯಮೂರ್ತಿಗಳ ನೇತೃತ್ವದ ಶೋಧನಾ ಸಮಿತಿಯು ವಿವಿಧ ನ್ಯಾಯಮಂಡಳಿಗಳಿಗೆ ನೇಮಿಸಲು ಶಿಫಾರಸು ಮಾಡಿದ ಹೆಸರುಗಳಲ್ಲಿ ಕೆಲವನ್ನು ಮಾತ್ರ ಆಯ್ದುಕೊಳ್ಳುವ ಪ್ರವೃತ್ತಿ ಬಗ್ಗೆ ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನವನ್ನು ಬುಧವಾರ ವ್ಯಕ್ತಪಡಿಸಿದೆ.

‘ನ್ಯಾಯಮಂಡಳಿಗಳಿಗೆ ನೇಮಕದ ವಿಚಾರದಲ್ಲಿ ಸರ್ಕಾರವು ಕೊನೆಯ ಕ್ಷಣದಲ್ಲಿ ತನಗೆ ಬೇಕಾದುದನ್ನು ಮಾಡುವುದಾಗಿದ್ದರೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿಯು ಮಾಡುವ ಶಿಫಾರಸುಗಳಿಗೆ ಏನು ಬೆಲೆ ಇದೆ’ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ಪೀಠವು ಪ್ರಶ್ನಿಸಿದೆ.

ನ್ಯಾಯಾಂಗ ಕ್ಷೇತ್ರದ ಹುದ್ದೆಗಳಿಗಾಗಿ 534 ಮತ್ತು ತಾಂತ್ರಿಕ ಹುದ್ದೆಗಳಿಗಾಗಿ 425 ವ್ಯಕ್ತಿಗಳ ಸಂದರ್ಶನವನ್ನು ನಡೆಸಲಾಗಿದೆ. ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಗೆ ನ್ಯಾಯಾಂಗ ಕ್ಷೇತ್ರದ 11 ಮತ್ತು ತಾಂತ್ರಿಕ ಕ್ಷೇತ್ರದ 11 ವ್ಯಕ್ತಿಗಳ ಹೆಸರನ್ನು ನೇಮಕಕ್ಕೆ ಶಿಫಾರಸು ಮಾಡಲಾಗಿದೆ. ಆದರೆ, ಕೆಲವರಿಗೆ ಮಾತ್ರ ನೇಮಕಾತಿ ಪತ್ರ ಕಳುಹಿಸಲಾಗಿದೆ. ಉಳಿದವರ ನೇಮಕವನ್ನು ಕಾಯ್ದಿರಿಸಲಾಗಿದೆ ಎಂದು ಪೀಠವು ಹೇಳಿದೆ.

ADVERTISEMENT

‘ಆಯ್ಕೆಯಾದ ಅಭ್ಯರ್ಥಿಗಳನ್ನು ಕಡೆಗಣಿಸಿ, ಕಾಯ್ದಿರಿಸಿದ ಪಟ್ಟಿಯಲ್ಲಿರುವವರನ್ನು ನೇಮಕ ಮಾಡಿಕೊಳ್ಳ
ಲಾಗದು. ಇದು ಯಾವ ರೀತಿಯ ನೇಮಕಾತಿ ವಿಧಾನ’ ಎಂದು ಕೇಂದ್ರವನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.

ಅಧ್ಯಕ್ಷರು, ನ್ಯಾಯಾಂಗ ಮತ್ತು ತಾಂತ್ರಿಕ ಕ್ಷೇತ್ರದ ಸದಸ್ಯರ ಕೊರತೆ ನ್ಯಾಯಮಂಡಳಿಗಳಲ್ಲಿ ತೀವ್ರವಾಗಿದೆ.

ಹಾಗಾಗಿ, ಈ ಹುದ್ದೆಗಳನ್ನು ಎರಡು ವಾರಗಳಲ್ಲಿ ಭರ್ತಿ ಮಾಡಬೇಕು ಎಂದು ಪೀಠವು ಸೂಚಿಸಿದೆ. ಹಾಗೆಯೇ, ಶಿಫಾರಸು ಮಾಡಿದ ಪಟ್ಟಿಯಲ್ಲಿರುವ ಹೆಸರುಗಳನ್ನು ಕೈಬಿಟ್ಟಿದ್ದರೆ ಅದಕ್ಕೆ ಕಾರಣ ಏನು ಎಂಬುದನ್ನು ತಿಳಿಸಬೇಕು ಎಂದೂ ಹೇಳಿದೆ.

ಶೋಧ ಮತ್ತು ಆಯ್ಕೆ ಸಮಿತಿಯು ಶಿಫಾರಸು ಮಾಡಿದ ಪಟ್ಟಿಯಿಂದಲೇ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಎರಡು ವಾರಗಳಲ್ಲಿ ಇದು ನಡೆಯಲಿದೆ ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರು ಪೀಠಕ್ಕೆ ಭರವಸೆ ನೀಡಿದ್ದಾರೆ.

ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ ಶೋಧ ಮತ್ತು ಆಯ್ಕೆ ಸಮಿತಿಯು 41 ಜನರ ಹೆಸರನ್ನು ಅಂತಿಮಗೊಳಿಸಿತ್ತು. ಆದರೆ, ಈ ಪಟ್ಟಿಯಿಂದ 13 ಮಂದಿಯನ್ನು ಮಾತ್ರ ಆಯ್ಕೆ ಮಾಡಲಾಗಿದೆ ಎಂಬುದನ್ನು ಹಿರಿಯ ವಕೀಲ ಅರವಿಂದ ದಾತಾರ್‌ ಅವರು ಪೀಠದ ಗಮನಕ್ಕೆ ತಂದವು.

‘ಇದು ಹೊಸದೇನೂ ಅಲ್ಲ. ಪ್ರತಿ ಬಾರಿಯೂ ಹೀಗೆಯೇ ಆಗುತ್ತದೆ’ ಎಂದು ಪೀಠವು ಹೇಳಿತು.

***

ಬೇಗನೆ ಸಂದರ್ಶನ ನಡೆಸಲು ಸರ್ಕಾರ ಕೋರಿತ್ತು. ಕೋವಿಡ್‌ ಸಮಯದಲ್ಲೂ ವಿವಿಧೆಡೆಗೆ ಭೇಟಿ ಕೊಟ್ಟು ಸಂದರ್ಶನ ನಡೆಸಿದ್ದು ವ್ಯರ್ಥವಾಯಿತು ಅಷ್ಟೇ

- ಎನ್‌.ವಿ. ರಮಣಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.