ADVERTISEMENT

‘ತ್ರಿವಳಿ ತಲಾಖ್‌’ ನಿಷೇಧಕ್ಕೆ ಲೋಕಸಭೆಯಲ್ಲಿ ಮಸೂದೆ ಅಂಗೀಕಾರ

ವಿಪಕ್ಷಗಳ ಸಭಾತ್ಯಾಗ; ಮಸೂದೆ ಹಿಂದೆ ರಾಜಕೀಯ ಲಾಭ ಅಡಗಿದೆ: ವಿರೋಧ ಪಕ್ಷಗಳ ಆರೋಪ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2018, 20:23 IST
Last Updated 27 ಡಿಸೆಂಬರ್ 2018, 20:23 IST
   

ನವದೆಹಲಿ: ಮುಸ್ಲಿಂ ಧರ್ಮದಲ್ಲಿ ಆಚರಣೆಯಲ್ಲಿರುವ ತ್ರಿವಳಿ ತಲಾಖ್‌ ಪದ್ಧತಿಯನ್ನು ಅಪರಾಧ ಎಂದು ಪರಿಗಣಿಸುವ ಐತಿಹಾಸಿಕ ಮಸೂದೆಯನ್ನು ಗುರುವಾರ ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.

ತ್ರಿವಳಿ ತಲಾಖ್‌ ನಿಷೇಧ ಮಸೂದೆ ಮಂಡಿಸಿದ ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌, ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆ ಮಸೂದೆಯ ಮುಖ್ಯ ಉದ್ದೇಶ ಎಂದು ತಿಳಿಸಿದರು.

‘ಮಸೂದೆಯಲ್ಲಿಯ ಕೆಲವು ಅಂಶಗಳು ಅಸಂವಿಧಾನಿಕವಾಗಿವೆ. ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಈ ಮಸೂದೆ ರೂಪಿಸಲಾಗಿದೆ’ ಎಂದು ವಿರೋಧ ಪಕ್ಷಗಳು ಆಕ್ಷೇಪ ಎತ್ತಿದವು.

ADVERTISEMENT

ಮುಸ್ಲಿಂ ಮಹಿಳೆಯರ ಸಬಲೀಕರಣಕ್ಕಿಂತಲೂ ರಾಜಕೀಯ ಲಾಭ ಇದರಲ್ಲಿ ಅಡಗಿದೆ ಎಂದು ಗಂಭೀರ ಆರೋಪ ಮಾಡಲಾಯಿತು.

ವಿರೋಧ ಪಕ್ಷಗಳ ಆರೋಪವನ್ನು ತಳ್ಳಿ ಹಾಕಿದ ಸರ್ಕಾರ, ಯಾವುದೇ ಧರ್ಮವನ್ನು ಗುರಿಯಾಗಿಸಿಕೊಂಡು ಈ ಮಸೂದೆ ರೂಪಿಸಿಲ್ಲ ಎಂದು ಸ್ಪಷ್ಟಪಡಿಸಿತು.

ಐದು ತಾಸು ಚರ್ಚೆ

ಸುಮಾರು ಐದು ತಾಸುಗಳ ಕಾವೇರಿದ ಚರ್ಚೆಯ ನಂತರ ಸ್ಪೀಕರ್ ಸುಮಿತ್ರಾ ಮಹಾಜನ್‌ ಅವರು ಮುಸ್ಲಿಂ ಮಹಿಳೆಯರ (ಮದುವೆ ಹಕ್ಕುಗಳ ರಕ್ಷಣೆ) ಮಸೂದೆ ಮತಕ್ಕೆ ಹಾಕಿದರು.

ಮಸೂದೆ ಪರ 245 ಮತ್ತು ವಿರುದ್ಧ ಕೇವಲ 11 ಮತ ಚಲಾವಣೆಯಾದವು. ಆದರೆ, ಇದಕ್ಕೂ ಮೊದಲೇ ಕಾಂಗ್ರೆಸ್‌, ಟಿಎಂಸಿ, ಆರ್‌ಜೆಡಿ ಮತ್ತು ಎಐಎಡಿಎಂಕೆ ಸದಸ್ಯರು ಸಭಾತ್ಯಾಗ ಮಾಡಿದರು.

ಇದಕ್ಕೂ ಮುನ್ನ ನಡೆದ ಚರ್ಚೆಯಲ್ಲಿ, ಮಸೂದೆ ಕರಡನ್ನು ಕೂಲಂಕಷವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟರು.

ಕರಡನ್ನು ಜಂಟಿ ಸದನಗಳ ಆಯ್ಕೆ ಸಮಿತಿಗೆ ಶಿಫಾರಸು ಮಾಡುವಂತೆ ಅವರು ಪಟ್ಟು ಹಿಡಿದರು. ಇದಕ್ಕೆ ವಿರೋಧ ಪಕ್ಷಗಳ ಸದಸ್ಯರು ಧ್ವನಿಗೂಡಿಸಿದರು. ಆದರೆ, ವಿರೋಧ ಪಕ್ಷಗಳ ಬೇಡಿಕೆಯನ್ನು ಮಹಾಜನ್‌ ತಳ್ಳಿ ಹಾಕಿದರು.

ಸುಗ್ರೀವಾಜ್ಞೆ ಮೊರೆ ಹೋಗಿದ್ದ ಕೇಂದ್ರ:ಕೇಂದ್ರ ಸರ್ಕಾರ ಕಳೆದ ಡಿಸೆಂಬರ್‌ನಲ್ಲಿ ತ್ರಿವಳಿ ತಲಾಖ್‌ ನಿಷೇಧ ಮಸೂದೆ ಅಂಗೀಕರಿಸಿತ್ತು. ರಾಜ್ಯಸಭೆಯಲ್ಲಿ ಅಗತ್ಯ ಸದಸ್ಯಬಲ ಇಲ್ಲದ ಕಾರಣಕ್ಕೆ ಮಸೂದೆಗೆ ಅಲ್ಲಿ ಅಂಗೀಕಾರ ದೊರೆಯಲಿಲ್ಲ.

ಸಂಸತ್ತಿನಲ್ಲಿ ಮಸೂದೆ ಅಂಗೀಕರಿಸುವ ಸರ್ಕಾರದ ಪ್ರಯತ್ನ ಯಶಸ್ವಿಯಾಗದ ಕಾರಣ ಕೇಂದ್ರ ಸರ್ಕಾರ ಸೆಪ್ಟೆಂಬರ್‌ನಲ್ಲಿ ಸುಗ್ರೀವಾಜ್ಞೆ ಮೊರೆ ಹೋಗಿತ್ತು.

ತಿದ್ದುಪಡಿ ಮಾಡಲಾದ ಅಂಶಗಳು

* ಪತ್ನಿ, ಆಕೆಯ ರಕ್ತಸಂಬಂಧಿಗಳು ಅಥವಾ ಸಂಬಂಧಿಗಳು ಮಾತ್ರ ಆಕೆಯ ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಬಹುದು. ಆಗ ಮಾತ್ರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳಬಹುದು.

* ನೆರೆ ಹೊರೆಯವರು ಅಥವಾ ಇತರರು ದೂರು ನೀಡಲು ಹೊಸ ಮಸೂದೆಯಲ್ಲಿ ಅವಕಾಶ ಇಲ್ಲ

* ದಂಪತಿ ರಾಜಿಯಾದರೆ ಮಾತ್ರ ಮಹಿಳೆ ದೂರು ವಾಪಸ್ ಪಡೆಯಬಹುದು

* ವಿಚಾರಣೆ ಆರಂಭವಾಗುವ ಮೊದಲೇ ಆರೋಪಿ ಜಾಮೀನು ಕೋರಿ ನ್ಯಾಯಾಲಯವನ್ನು ಸಂಪರ್ಕಿಸಬಹುದು. ಆದರೆ, ಜಾಮೀನು ನೀಡಲು ಹಲವು ಷರತ್ತು ವಿಧಿಸಲಾಗಿದೆ

* ಪತ್ನಿಯ ಅಹವಾಲು ಕೇಳಿದ ನಂತರವಷ್ಟೇ ನ್ಯಾಯಾಧೀಶರು ಪತಿಗೆ ಜಾಮೀನು ನೀಡುವ ಅಥವಾ ತಿರಸ್ಕರಿಸುವ ತೀರ್ಮಾನ ತೆಗೆದುಕೊಳ್ಳಬಹುದು

* ಹೆಂಡತಿಗೆ ಪರಿಹಾರ ನೀಡಲು ಗಂಡ ಒಪ್ಪಿಕೊಂಡ ಬಳಿಕ ಮಾತ್ರವೇ ಜಾಮೀನು ಪಡೆಯಲು ಸಾಧ್ಯ.

* ಜೀವನಾಂಶ ಮತ್ತು ಪರಿಹಾರದ ಮೊತ್ತವನ್ನು ನಿರ್ಧರಿಸುವ ಅಧಿಕಾರವನ್ನು ನ್ಯಾಯಾಧೀಶರ ವಿವೇಚನೆಗೆ ಬಿಡಲಾಗಿದೆ

ಲೋಕಸಭೆ ಮಸೂದೆಗೆ ಅಂಗೀಕಾರ ನೀಡಿರುವುದನ್ನು ರಾಷ್ಟ್ರೀಯ ಮಹಿಳಾ ಆಯೋಗ ಸ್ವಾಗತಿಸಿದೆ.

ಪರಿಷ್ಕೃತ ಮಸೂದೆಯಲ್ಲಿ ಏನಿದೆ?

ತ್ರಿವಳಿ ತಲಾಖ್‌ ಕಾನೂನುಬಾಹಿರ ಮತ್ತು ಜಾಮೀನುರಹಿತ ಕ್ರಿಮಿನಲ್‌ ಅಪರಾಧ ಎಂದು ಪರಿಗಣಿಸಲಾಗಿದೆ.ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಿಂದಲೇ ಜಾಮೀನು ಪಡೆಯಬೇಕಾಗುತ್ತದೆ.

ತಲಾಖ್‌ ನೀಡುವ ಮುಸ್ಲಿಂ ಪುರುಷರಿಗೆ ಮೂರು ವರ್ಷ ಜೈಲು ಶಿಕ್ಷೆ ನೀಡುವಂತೆ ಮಸೂದೆ ಶಿಫಾರಸು ಮಾಡಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.