ADVERTISEMENT

ತ್ರಿಪುರಾ ಚುನಾವಣೆ | ಬುಡಕಟ್ಟು ಪ್ರದೇಶದಲ್ಲಿ BJP ಬಲ ಕಳೆದುಕೊಳ್ಳಲಿದೆ: ಯೆಚೂರಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2023, 5:29 IST
Last Updated 12 ಫೆಬ್ರುವರಿ 2023, 5:29 IST
   

ರಾಧಾಕಿಶೋರ್‌ಪುರ್ (ತ್ರಿಪುರಾ): ತ್ರಿಪುರಾದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಬುಡಕಟ್ಟು ಪ್ರದೇಶದಲ್ಲಿ ಬಲ ಕಳೆದುಕೊಳ್ಳಲಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಹೇಳಿದ್ದಾರೆ.

2018ರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಐಪಿಎಫ್‌ಟಿ ಮೈತ್ರಿಕೂಟವು 36 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂದಿತ್ತು. ಇದರಲ್ಲಿ ಅರ್ಧದಷ್ಟು ಕ್ಷೇತ್ರಗಳು ಬುಡಕಟ್ಟು ಪ್ರದೇಶಗಳ ವ್ಯಾಪ್ತಿಲ್ಲಿದ್ದವು. ಆದರೆ, ಈ ಬಾರಿ ಐಪಿಎಫ್‌ಟಿಗೆ ಬಿಜೆಪಿ 5 ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ. ಬುಡಕಟ್ಟು ಪ್ರದೇಶಗಳಲ್ಲಿ ಪ್ರಾಬಲ್ಯ ಹೊಂದಿರುವ ‘ಟಿಪ್ರಮೋಥಾ’ ಚುನಾವಣಾ ಕಣಕ್ಕೆ ಧುಮುಕಿದೆ. ಕಳೆದ ಬಾರಿ ಸಿಕ್ಕಿದ್ದ ಬುಡಕಟ್ಟು ಪ್ರದೇಶಗಳ ಬೆಂಬಲ ಈ ಬಾರಿ ಬಿಜೆಪಿಗೆ ಸಿಗುವ ಸಾಧ್ಯತೆ ಕಡಿಮೆ. ಇದು ಸಿಪಿಎಂ–ಕಾಂಗ್ರೆಸ್ ಮೈತ್ರಿಕೂಟಕ್ಕೆ ನೆರವಾಗಲಿದೆ’ ಎಂದು ಯೆಚೂರಿ ಹೇಳಿದ್ದಾರೆ.

2013ರಲ್ಲಿ ಕಾಂಗ್ರೆಸ್ ಶೇ 37ರಷ್ಟು ಹಾಗೂ ಸಿಪಿಎಂ ಶೇ 48ರಷ್ಟು ಮತಗಳನ್ನು ಗಳಿಸಿದ್ದವು. 2018ರಲ್ಲಿ ಬಿಜೆಪಿ ಶೇ 43.59ರಷ್ಟು ಮತಗಳನ್ನು ಪಡೆದು ಅಧಿಕಾರಕ್ಕೆ ಬಂದಿತ್ತು. ಆದರೆ ಈ ಬಾರಿ ಸಿಪಿಎಂ ಹಾಗೂ ಕಾಂಗ್ರೆಸ್ ಒಟ್ಟಾಗಿ ಕಣಕ್ಕಿಳಿದಿದ್ದು, ಕಳೆದು ಹೋಗಿರುವ ಮತಗಳನ್ನು ಬಿಜೆಪಿಯಿಂದ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲಿವೆ ಎಂದು ಯೆಚೂರಿ ಆಶಾಭಾವ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.