ADVERTISEMENT

ದೆಹಲಿಯಲ್ಲಿ ಟ್ರಕ್ ಪಲ್ಟಿ: 4 ವರ್ಷದ ಬಾಲಕ ಸೇರಿ ನಾಲ್ವರ ದುರ್ಮರಣ

ಪಿಟಿಐ
Published 25 ಫೆಬ್ರುವರಿ 2023, 6:45 IST
Last Updated 25 ಫೆಬ್ರುವರಿ 2023, 6:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮಧ್ಯ ದೆಹಲಿಯ ಆನಂದ್ ಪರ್ವತ್ ಪ್ರದೇಶದಲ್ಲಿ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ಗೆ (MCD) ಸೇರಿದ ಟ್ರಕ್ ಪಲ್ಟಿಯಾದ ಪರಿಣಾಮ 4 ವರ್ಷದ ಬಾಲಕ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಇಂದು (ಶನಿವಾರ) ಮುಂಜಾನೆ 1.30 ರ ಸುಮಾರಿಗೆ ಆನಂದ್ ಪರ್ವತ್ ರಸ್ತೆಯಲ್ಲಿ ಟ್ರಕ್ ಪಲ್ಟಿಯಾಗಿದೆ. ಈ ವೇಳೆ ಕಾರ್ಮಿಕರು ಸೇರಿ ಕೆಲವು ಮಂದಿ ಟ್ರಕ್ ಅಡಿಯಲ್ಲಿ ಸಿಲುಕಿಕೊಂಡಿದ್ದರು ಎಂದು ಹೇಳಿದ್ದಾರೆ.

ಟ್ರಕ್ ಅನ್ನು ಕ್ರೇನ್ ಸಹಾಯದಿಂದ ಮೇಲಕ್ಕೆತ್ತಲಾಯಿತು. ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಕಿಲ್ಲು (40) ಎನ್ನುವವರನ್ನು ಸಮೀಪದ ಜೀವನ್ ಮಾಲಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರ) ಸಂಜಯ್ ಕುಮಾರ್ ಸೇನ್ ತಿಳಿಸಿದ್ದಾರೆ.

ADVERTISEMENT

ಕಿಲ್ಲು ಅಲ್ಲದೆ, ಅವರ ಪುತ್ರ ಅನುಜ್ (4), ರಮೇಶ್ (30) ಮತ್ತು ಸೋನಮ್ (25) ಬಲಿಯಾದ ಇತರ ಮೂವರು. ಇವರೆಲ್ಲರೂ ಮಧ್ಯಪ್ರದೇಶದವರೆಂದು ಎಂದು ಸಂಜಯ್ ಕುಮಾರ್ ಹೇಳಿದ್ದಾರೆ.

ವೇಗದ ಚಾಲನೆಯಿಂದಾಗಿ ಟ್ರಕ್‌ ಪಲ್ಟಿಯಾಗಿದ್ದು ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದವರ ಮೇಲೆ ಉರುಳಿದೆ. ಟ್ರಕ್ ಚಾಲಕ ಪರಾರಿಯಾಗಿದ್ದಾನೆ. ಶವ ಪರೀಕ್ಷೆ ಸಲುವಾಗಿ ಮೃತದೇಹಗಳನ್ನು ರಾಮ್ ಮನೋಹರ್ ಲೋಹಿಯಾ (ಆರ್‌ಎಂಎಲ್) ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದೂ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.