
ನ್ಯೂಯಾರ್ಕ್‌ನ ಮೇಯರ್ ಜೋಹ್ರಾನ್ ಮಮ್ದಾನಿ ಅವರು ಶನಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಶ್ವೇತಭವನದ ಒವಲ್ ಕಚೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು
–ಪಿಟಿಐ ಚಿತ್ರ
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದ ನ್ಯೂಯಾರ್ಕ್ ಮೇಯರ್ ಜೋಹ್ರಾನ್ ಮಮ್ದಾನಿ ನಡೆಯನ್ನು ಪ್ರಶಂಸಿರುವ ಕಾಂಗ್ರೆಸ್ ನಾಯಕ, ಸಂಸದ ಶಶಿ ತರೂರ್, ‘ಪ್ರಜಾಪ್ರಭುತ್ವ ಹೀಗೆಯೇ ಕೆಲಸ ಮಾಡಬೇಕು, ಭಾರತದಲ್ಲಿ ಇದನ್ನು ಎದುರು ನೋಡುತ್ತೇನೆ’ ಎಂದು ತಿಳಿಸಿದ್ದಾರೆ.
ಇದೇ ಅವಕಾಶವನ್ನು ಬಳಸಿಕೊಂಡಿರುವ ಬಿಜೆಪಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೂ ಈ ಸಂದೇಶ ಅರ್ಥವಾಗುತ್ತದೆ ಎಂದು ಪ್ರತಿಕ್ರಿಯಿಸಿದೆ.
ಟ್ರಂಪ್ ಹಾಗೂ ಮಮ್ದಾನಿ ಭೇಟಿಯಾದ ವಿಡಿಯೊವನ್ನು ತಮ್ಮ ‘ಎಕ್ಸ್‘ ಖಾತೆಯಲ್ಲಿ ಮರುಫೋಸ್ಟ್ ಮಾಡಿರುವ ತರೂರ್, ‘ಪ್ರಜಾಪ್ರಭುತ್ವವು ಹೀಗೆಯೇ ಕೆಲಸ ಮಾಡುತ್ತದೆ. ಚುನಾವಣಾ ಸಂದರ್ಭದಲ್ಲಿ ನಿಮ್ಮ ದೃಷ್ಟಿಕೋನದಲ್ಲಿ ಉತ್ಸಾಹದಿಂದ ಹೋರಾಟ ನಡೆಸಬೇಕು. ಚುನಾವಣೆ ಮುಗಿದ ನಂತರ, ಜನರ ಸೇವೆ ಹಾಗೂ ದೇಶದ ಹಿತದೃಷ್ಟಿಯಿಂದ ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು’ ಎಂದು ಹೇಳಿದ್ದಾರೆ.
‘ಇಂತಹುದ್ದೇ ಬೆಳವಣಿಗೆಗಳನ್ನು ಭಾರತದಲ್ಲಿಯೂ ನೋಡಲು ಬಯಸುತ್ತೇನೆ, ನನ್ನ ಕೆಲಸವನ್ನು ನಾನು ಮಾಡುತ್ತಿದ್ದೇನೆ’ ಎಂದು ವಿವರಿಸಿದ್ದಾರೆ.
ತರೂರ್ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನ್‌ವಾಲಾ, ತರೂರ್ ಅವರು ಮೆಚ್ಚುಗೆ ವ್ಯಕ್ತಪಡಿಸಿರುವುದು ರಾಹುಲ್ ಗಾಂಧಿ ಅವರಿಗೂ ಸಂದೇಶ ಅರ್ಥವಾಗಲಿದೆ ಎಂದು ಭಾವಿಸುತ್ತೇವೆ. ಮತ್ತೊಮ್ಮೆ ದೇಶವೇ ಮೊದಲು, ಪರಿವಾರ ಅಲ್ಲ ಎಂಬುದನ್ನು ಕಾಂಗ್ರೆಸ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಪ್ರಜಾತಾಂತ್ರಿಕವಾಗಿ ವರ್ತಿಸಿ, ಸೋತವರಂತೆ ಅಲ್ಲ. ಇದರಿಂದ ರಾಹುಲ್ ಗಾಂಧಿ ಅವರಿಗೂ ಸಂದೇಶ ತಲುಪಿದೆಯಾ..? ಅಥವಾ ತರೂರ್ ವಿರುದ್ಧ ಮತ್ತೊಂದು ಫತ್ವಾ ಹೊರಡಲಿದೆಯಾ? ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.