ADVERTISEMENT

ಟ್ರಂಪ್ ಭೇಟಿ: ಅಹಮದಾಬಾದ್ ನಲ್ಲಿ ಪೊಲೀಸರ ಸರ್ಪಗಾವಲು

ಏಜೆನ್ಸೀಸ್
Published 24 ಫೆಬ್ರುವರಿ 2020, 6:35 IST
Last Updated 24 ಫೆಬ್ರುವರಿ 2020, 6:35 IST
ಡೊನಾಲ್ಡ್ ಟ್ರಂಪ್ ಭೇಟಿ ನೀಡುವ ಕಾರಣ ಅಹಮದಾಬಾದ್ ಪೊಲೀಸರಿಂದ ಬಿಗಿಭದ್ರತೆ
ಡೊನಾಲ್ಡ್ ಟ್ರಂಪ್ ಭೇಟಿ ನೀಡುವ ಕಾರಣ ಅಹಮದಾಬಾದ್ ಪೊಲೀಸರಿಂದ ಬಿಗಿಭದ್ರತೆ   

ಅಹಮದಾಬಾದ್(ಗುಜರಾತ್): ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ನೀಡುವ ಮೊಟೆರಾ ಸ್ಟೇಡಿಯಂಗೆ ಪೊಲೀಸರು ಬಿಗಿಭದ್ರತೆ ಕೈಗೊಂಡಿದ್ದಾರೆ. ಕೇವಲ ಸ್ಟೇಡಿಯಂ ಅಲ್ಲದೆ, ಮೋದಿ ಹಾಗೂ ಟ್ರಂಪ್ ಅವರ ಮೆರವಣಿಗೆ ಹೊರಡುವ ರಸ್ತೆಯುದ್ದಕ್ಕೂ ಮಫ್ತಿ ಪೊಲೀಸರು ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಸಮವಸ್ತ್ರ ಧರಿಸಿದ ಪೊಲೀಸರನ್ನು ನಿಯೋಜಿಸಲಾಗಿದೆ. ಸಿಸಿಟಿವಿ ಸೇರಿದಂತೆ ಕ್ಯಾಮರಾಗಳ ಹದ್ದಿನಕಣ್ಣು ಈ ಗಣ್ಯವ್ಯಕ್ತಿಗಳ ಸುತ್ತ ನೆಟ್ಟಿವೆ.

ಟ್ರಂಪ್ ಕುಟುಂಬ ಸಹಿತ ಭೇಟಿ ನೀಡುತ್ತಿರುವುದು ಇಲ್ಲಿ ವಿಶೇಷವಾಗಿದೆ. ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಲಿರುವ ಟ್ರಂಪ್ ಅಮೆರಿಕಾದಿಂದ ಏರ್ ಫೋರ್ಸ್ ಒನ್ ವಿಮಾನದ ಮೂಲಕ ನೇರವಾಗಿ ಅಹಮದಾಬಾದ್‌‌ಗೆ ಬಂದಿಳಿಯಲಿದ್ದಾರೆ.ರಸ್ತೆಯ ಇಕ್ಕೆಲಗಳಲ್ಲೂ ಕಬ್ಬಿಣದ ಬ್ಯಾರಿಕೇಡ್‌‌ಗಳಿಂದ ತಡೆ ನಿರ್ಮಿಸಲಾಗಿದೆ. 108 ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳು, 33 ಎಸ್ಪಿ ಮಟ್ಟದ ಅಧಿಕಾರಿಗಳು, 75 ಮಂದಿ ಡಿವೈಎಸ್ಪಿ ಮಟ್ಟದ ಅಧಿಕಾರಿಗಳು, ಇನ್ಸ್ ಪೆಕ್ಟರ್‌‌ಗಳು, ಇತರೆ ಸಾವಿರಕ್ಕೂ ಅಧಿಕ ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ.

ಇದಲ್ಲದೆ, ಭಾರತೀಯ ವಾಯುಸೇನೆಯ ಅತ್ಯಾಧುನಿಕ ಯಂತ್ರ, ಭೂಸೇನೆಯ ತುಕಡಿಗಳನ್ನೂ ಭದ್ರತೆಗೆ ನಿಯೋಜಿಸಲಾಗಿದೆ.
ಸ್ಟೇಡಿಯಂನಲ್ಲಿ 'ನಮಸ್ತೆ ಟ್ರಂಪ್' ಕಾರ್ಯಕ್ರಮದಲ್ಲಿ ಲಕ್ಷಕ್ಕೂ ಅಧಿಕ ಮಂದಿ ಜನರನ್ನು ಉದ್ದೇಶಿಸಿ ಮಾತನಾಡಲಿರುವ ಟ್ರಂಪ್ ಅವರು, ನಂತರ ಮೆರವಣಿಗೆ ಹೊರಡಲಿದ್ದಾರೆ.

ADVERTISEMENT

ಇದಾದ ನಂತರ ಸಾಬರಮತಿ ಆಶ್ರಮಕ್ಕೂ ಭೇಟಿ ನೀಡಲಿರುವ ಟ್ರಂಪ್ ಅಲ್ಲಿ ಸ್ವಲ್ಪ ಸಮಯ ಕಳೆಯಲಿದ್ದಾರೆ. ಇಲ್ಲಿ ಮೂರು ವಿಶೇಷ ಕುರ್ಚಿಗಳನ್ನು ಹಾಕಲಾಗಿದ್ದು, ಒಂದು ಡೊನಾಲ್ಡ್ ಟ್ರಂಪ್ , ಮತ್ತೊಂದು ಟ್ರಂಪ್ ಪತ್ನಿ , ಇನ್ನೊಂದು ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಮೀಸಲಿಟ್ಟಿವೆ. ಈ ಮೂರು ಕುರ್ಚಿಗಳನ್ನುಈಗಾಗಲೇ ಅಮೆರಿಕಾ ಅಧ್ಯಕ್ಷರ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ್ದು, ಗುಜರಾತ್ ಪೊಲೀಸರಿಂದ ಭದ್ರತಾ ಪಡೆ ಈಗಾಗಲೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ವಿಶ್ವದ ಯಾವುದೇ ದಿಕ್ಕಿನಿಂದ ಅಮದಾಬಾದ್‌ಗೆ ‌ಬರುವ ಹಾಗೂ ಇಲ್ಲಿಂದ ಹೊರಡುವ ವಿಮಾನಗಳನ್ನು ಟ್ರಂಪ್ ಭೇಟಿ ನೀಡುವ ಮೂರು ಗಂಟೆಗಳ ಮೊದಲೇ ನಿರ್ಬಂಧಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿ ಮನೋಜ್ ಗಂಗಾಲ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.