ADVERTISEMENT

ಬ್ರಹ್ಮೋತ್ಸವ ವೇಳೆ ಭೇಟಿ ನೀಡುವ ಭಕ್ತರ ಎಣಿಕೆ: ಇಸ್ರೊ ನೆರವು ಪಡೆಯಲಿರುವ ಟಿಟಿಡಿ

ಪಿಟಿಐ
Published 16 ಸೆಪ್ಟೆಂಬರ್ 2025, 15:56 IST
Last Updated 16 ಸೆಪ್ಟೆಂಬರ್ 2025, 15:56 IST
–
   

ತಿರುಪತಿ(ಆಂಧ್ರಪ್ರದೇಶ): ಮುಂಬರುವ ‘ಶ್ರೀವಾರಿ ಸಾಲಕಟ್ಲ ಬ್ರಹ್ಮೋತ್ಸವ’ ಸಂದರ್ಭದಲ್ಲಿ ಭೇಟಿ ನೀಡುವ ಭಕ್ತರ ಸಂಖ್ಯೆಯನ್ನು ಉಪಗ್ರಹ ಬಳಸಿ ಎಣಿಕೆ ಮಾಡುವುದಕ್ಕಾಗಿ ಇಸ್ರೊ ನೆರವು ಪಡೆಯಲಾಗುತ್ತದೆ ಎಂದು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಅಧ್ಯಕ್ಷ ಬಿ.ಆರ್‌.ನಾಯ್ಡು ಮಂಗಳವಾರ ತಿಳಿಸಿದ್ದಾರೆ.

ಭಕ್ತರ ಸಂಖ್ಯೆ ಎಣಿಕೆಗೆ ಅನುಕೂಲವಾಗಲು ಹೆಚ್ಚುವರಿ ಸಿ.ಸಿ.ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು, ಜನಜಂಗುಳಿಯಲ್ಲಿ ಚಿಕ್ಕಮಕ್ಕಳು ಕಳೆದುಹೋಗುವುದನ್ನು ತಪ್ಪಿಸಲು ‘ಜಿಯೊ–ಟ್ಯಾಗ್‌’ಗಳನ್ನು ಬಳಸಲಾಗುವುದು ಹಾಗೂ ನಿರಂತರ ವಿದ್ಯುತ್‌ ಪೂರೈಕೆಗೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಇಲ್ಲಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ನಾಯ್ಡು ತಿಳಿಸಿದ್ದಾರೆ.

ಈ ವರ್ಷದ ಬ್ರಹ್ಮೋತ್ಸವ ವಿಧಿಗಳು ಸೆಪ್ಟೆಂಬರ್ 24ರಿಂದ ಅಕ್ಟೋಬರ್ 2ರ ವರೆಗೆ ನಡೆಯಲಿವೆ. ಈ ವೇಳೆ, ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರು ವೆಂಕಟೇಶ್ವರ ದೇವಸ್ಥಾನಕ್ಕೆ ರೇಷ್ಮೆ ವಸ್ತ್ರಗಳನ್ನು ಸಮರ್ಪಿಸಿ, ‘ಪೆದ್ದ ಶೇಷ ವಾಹನ’ ಉತ್ಸವದಲ್ಲಿ ಪಾಲ್ಗೊಳ್ಳುವರು.

ADVERTISEMENT

25ರಂದು 5ನೇ ಯಾತ್ರಿಗಳ ಸೌಲಭ್ಯಗಳ ಸಂಕೀರ್ಣ (ಪಿಎಸಿ) ‘ವೆಂಕಟಾದ್ರಿ ನಿಲಯಂ’ ಅನ್ನು ಮುಖ್ಯಮಂತ್ರಿ ನಾಯ್ಡು ಅವರು ಉದ್ಘಾಟಿಸುವರು. 2026ರ ಕ್ಯಾಲೆಂಡರ್‌ ಹಾಗೂ ಡೈರಿಗಳನ್ನು ಕೂಡ ಬಿಡುಗಡೆ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.