ತಿರುಪತಿ: ತಿರುಮಲದ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಕಳೆದ ಐದು ವರ್ಷಗಳಲ್ಲಿ ನಡೆದ ಎಲ್ಲ ಅಕ್ರಮಗಳ ಕುರಿತಂತೆ ಭ್ರಷ್ಟಾಚಾರ ನಿಗ್ರಹ ದಳದಿಂದ (ಎಸಿಬಿ) ತನಿಖೆ ನಡೆಸಲು ಸೂಚನೆ ನೀಡಬೇಕು ಎಂದು ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರಿಗೆ ಮನವಿ ಮಾಡಲು ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಅಧ್ಯಕ್ಷ ಬಿ.ಆರ್.ನಾಯ್ಡು ನಿರ್ಧರಿಸಿದ್ದಾರೆ.
ಕಳೆದ ಮೂರು ತಿಂಗಳಲ್ಲಿ ಟಿಟಿಡಿ ಗೋಶಾಲೆಯಲ್ಲಿ 100 ಗೋವುಗಳು ಮೃತಪಟ್ಟಿವೆ ಎಂದು ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಮಾಜಿ ಅಧ್ಯಕ್ಷ ಬಿ.ಕರುಣಾಕರ ರೆಡ್ಡಿ ಅವರು ಆರೋಪಿಸಿದ್ದರು.
ಇಲ್ಲಿನ ಗೋಶಾಲೆಗೆ ಭೇಟಿ ನೀಡಿದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಕಳೆದ 5 ವರ್ಷಗಳಲ್ಲಿ ಟಿಟಿಡಿಯಲ್ಲಿ ನಡೆದ ಎಲ್ಲ ಅಕ್ರಮಗಳ ಕುರಿತಂತೆ, ಎಸಿಬಿಯಿಂದ ತನಿಖೆ ನಡೆಸುವಂತೆ ನಿಯೋಗದಲ್ಲಿ ತೆರಳಿ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು’ ಎಂದು ವಿವರಿಸಿದರು.
‘ಕೆಲವು ವ್ಯಕ್ತಿಗಳು ದೇವಾಲಯದ ಆಡಳಿತದ ವಿರುದ್ಧ ಮುಖ್ಯವಾಹಿನಿ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಆರೋಪ ಮಾಡುತ್ತಿದ್ದಾರೆ. ಹಿಂದಿನ ವೈಎಸ್‌ಆರ್ ಸರ್ಕಾರದ ಅವಧಿಯಲ್ಲಿ ಹಸುಗಳಿಗೆ ಸೂಕ್ತ ಮೇವು ಒದಗಿಸಲು ವಿಫಲರಾಗಿದ್ದರು. ಭಕ್ತರು ದೇವಸ್ಥಾನಕ್ಕೆ ಉಡುಗೊರೆಯಾಗಿ ನೀಡಿದ್ದ ಒಂಗೋಲ್ ಹಸುಗಳನ್ನು ಹಿಂದಿನ ಆಡಳಿತ ಮಂಡಳಿಯವರೇ ಮಾರಿದ್ದಾರೆ. ಅವರೇ ಈಗ ಟಿಡಿಪಿ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.