ADVERTISEMENT

ಮ್ಯಾನ್ಮಾರ್‌ಗೆ ಯುವಕರ ಕಳ್ಳಸಾಗಣೆ: ದೆಹಲಿಯಲ್ಲಿ ಇಬ್ಬರ ಬಂಧನ

ಉದ್ಯೋಗಾವಕಾಶದ ಭರವಸೆ; ಸೈಬರ್‌ ಅಪರಾಧ ಚಟುವಟಿಕೆಗಳಿಗೆ ಬಳಕೆ

ಪಿಟಿಐ
Published 22 ನವೆಂಬರ್ 2025, 17:14 IST
Last Updated 22 ನವೆಂಬರ್ 2025, 17:14 IST
.
.   

ನವದೆಹಲಿ: ಉದ್ಯೋಗಾವಕಾಶದ ನೆಪದಲ್ಲಿ ಯುವಕರನ್ನು ಮ್ಯಾನ್ಮಾರ್‌ಗೆ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಡಿ ದೆಹಲಿಯ ಬವಾನಾ ನಿವಾಸಿ ಡ್ಯಾನಿಶ್‌ ರಾಜಾ (24) ಮತ್ತು ಫರೀದಾಬಾದ್‌ನ ಹರ್ಷ (30) ಎನ್ನುವವರನ್ನು ದೆಹಲಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಯುವಕರನ್ನು ‘ಸೈಬರ್‌ ಗುಲಾಮಗಿರಿ’ಗೆ ತಳ್ಳಿ ಸೈಬರ್‌ ಅಪರಾಧ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿತ್ತು. ಅಲ್ಲಿನ ಮಿಲಿಟರಿ ಅಧಿಕಾರಿಗಳು ಅ.22ರಂದು ಮೈವಾಡಿಯಲ್ಲಿರುವ ಕೇಂದ್ರದ ಮೇಲೆ ದಾಳಿ ಮಾಡಿ, ಸೈಬರ್‌ ವಂಚನೆ ಜಾಲದಲ್ಲಿ ಸಿಲುಕಿದ್ದ ಅನೇಕ ಭಾರತೀಯರನ್ನು ರಕ್ಷಿಸಿದ ನಂತರ ಈ ವಿಷಯ ಗೊತ್ತಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಭಾರತದ ವಿವಿಧ ರಾಜ್ಯಗಳ ಸುಮಾರು 300 ಮಂದಿಯನ್ನು ಸ್ವದೇಶಕ್ಕೆ ಕರೆತರಲಾಗಿದೆ. ಇವರು ಮ್ಯಾನ್ಮಾರ್‌ನಾದ್ಯಂತ ಅನೇಕ ಸೈಬರ್‌ ವಂಚನೆಯ ಕೇಂದ್ರಗಳಲ್ಲಿ ಬಲವಂತವಾಗಿ ಕೆಲಸ ಮಾಡುತ್ತಿದ್ದರು. ಅಮೆರಿಕದ ಪ್ರಜೆಗಳನ್ನು ಗುರಿಯಾಗಿಸಿಕೊಂಡು ವಂಚನೆ ಎಸಗುತ್ತಿದ್ದರು’ ಎಂದು ಹೇಳಿದ್ದಾರೆ.

ADVERTISEMENT

‘ಸೈಬರ್‌ ಗುಲಾಮಗಿರಿಯು ಮಾನವ ಕಳ್ಳಸಾಗಣೆಯನ್ನು ಸೂಚಿಸುತ್ತದೆ. ಉದ್ಯೋಗಾವಕಾಶ ಕಲ್ಪಿಸುವುದಾಗಿ ಯುವಕರನ್ನು ನಂಬಿಸಿ ವಂಚಿಸಲಾಗುತ್ತದೆ. ನಂತರ ಸೈಬರ್‌ ವಂಚನೆ ಚಟುವಟಿಕೆಗಳಲ್ಲಿ ತೊಡಗುವಂತೆ ಒತ್ತಾಯಿಸಲಾಗುತ್ತದೆ’ ಎಂದಿದ್ದಾರೆ.

‘ಮ್ಯಾನ್ಮಾರ್‌ನಿಂದ ದೆಹಲಿಗೆ ಕರೆತಂದವರನ್ನು ಸೈಬರ್‌ ಅಪರಾಧ ಸಮನ್ವಯ ಕೇಂದ್ರದ ಸಹಯೋಗದಲ್ಲಿ ವಿಚಾರಣೆ ನಡೆಸಲಾಯಿತು. ಅವರು ನೀಡಿದ ಮಾಹಿತಿ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.

ದೂರು ದಾಖಲಿಸಿದ ಇಮ್ತಿಯಾಜ್‌

‘ಸ್ವದೇಶಕ್ಕೆ ಮರಳಿದ ಯುವಕರಲ್ಲಿ ಒಬ್ಬರಾದ ಬವಾನಾದ ಇಮ್ತಿಯಾಜ್‌ ಬಾಬು ದೂರು ದಾಖಲಿಸಿದ್ದಾರೆ. ವಿದೇಶದಲ್ಲಿ ಹೆಚ್ಚಿನ ಸಂಬಳದ ಡೇಟಾ ಎಂಟ್ರಿ ಉದ್ಯೋಗದ ಭರವಸೆ ನೀಡಿ ತನ್ನನ್ನು ವಂಚಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ’ ಎಂದು ಹೇಳಿದ್ದಾರೆ.

‘ಕೋಲ್ಕತ್ತ ಬ್ಯಾಂಕಾಕ್‌ ಹಾಗೂ ಮೈವಾಡಿ ಮೂಲಕ ಕಳ್ಳಸಾಗಣೆ ಮಾಡಲಾಯಿತು. ಕೆ.ಕೆ. ಪಾರ್ಕ್‌ನ ಕೇಂದ್ರದಲ್ಲಿಟ್ಟು ಹಲ್ಲೆ ನಡೆಸಿದರು. ಅಮೆರಿಕದ ಪ್ರಜೆಗಳಿಗೆ ಸೈಬರ್‌ ವಂಚನೆ ಎಸಗುವಂತೆ ಒತ್ತಾಯಿಸಿದ್ದರು. ನಾವು ಅಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಶಸ್ತ್ರಸಜ್ಜಿತ ಕಾವಲುಗಾರರನ್ನು ನೇಮಿಸಿದ್ದರು ಎಂದು ಅವರು ತಿಳಿಸಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.