ADVERTISEMENT

ಶ್ರೀನಗರ: ಪತ್ರಕರ್ತರೊಬ್ಬರ ಮೇಲೆ ದಾಳಿ, ಇಬ್ಬರು ಹೈಬ್ರಿಡ್‌ ಉಗ್ರರ ಬಂಧನ

ಪಿಟಿಐ
Published 31 ಮಾರ್ಚ್ 2023, 13:14 IST
Last Updated 31 ಮಾರ್ಚ್ 2023, 13:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಶ್ರೀನಗರ: ‘ಸಾಮಾಜಿಕ ಮಾಧ್ಯಮದ ಪತ್ರಕರ್ತರೊಬ್ಬರ ಮೇಲೆ ಕಳೆದ ವರ್ಷ ನಡೆದ ದಾಳಿಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿ ನಿಷೇಧಿತ ದಿ ರೆಸಿಸ್ಟಂಟ್‌ ಫ್ರಂಟ್‌ ಉಗ್ರ ಸಂಘಟನೆಯ (ಟಿಆರ್‌ಎಫ್) ಇಬ್ಬರು ಹೈಬ್ರಿಡ್‌ ಭಯೋತ್ಪಾದಕರನ್ನು (ನಾಗರಿಕ ವೇಷದಲ್ಲಿರುವ ಭಯೋತ್ಪಾದಕರು) ಬಂಧಿಸಲಾಗಿದೆ’ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಪತ್ರಕರ್ತರ ಮೇಲಿನ ದಾಳಿಯ ಪ್ರಕರಣ ಕುರಿತು ತನಿಖೆ ನಡೆಸುತ್ತಿದ್ದ ವೇಳೆ ವಿಶೇಷ ತನಿಖಾ ದಳವನ್ನು (ಎಸ್ಐಟಿ) ರಚಿಸಲಾಯಿತು. ತನಿಖೆಯ ಸಮಯದಲ್ಲಿ ಸಿಕ್ಕ ಸಾಂದರ್ಭಿಕ ಹಾಗೂ ತಾಂತ್ರಿಕ ಸಾಕ್ಷಿಗಳ ಆಧಾರದ ಮೇಲೆ ಹಲವು ಶಂಕಿತರನ್ನು ವಿಚಾರಣೆ ನಡೆಸಲಾಯಿತು’ ಎಂದು ಪೊಲೀಸ್‌ ವಕ್ತಾರರೊಬ್ಬರು ಹೇಳಿದರು.

‘ವಿಚಾರಣೆಯಲ್ಲಿ ಶೋಪಿಯಾನ್‌ ಜಿಲ್ಲೆಯ ಸೈದಾಪೋರಾ ಪಯೀನ್‌ ಗ್ರಾಮದ ನಿವಾಸಿಗಳಾದ ಸುಹಿಬ್‌ ರಾಯೇಜ್‌ ಹಾಗೂ ಅನಾಯತ್‌ ಉಲ್ಲಾ ಇಕ್ಬಾಲ್‌ ಎಂಬ ಇಬ್ಬರು ಶಂಕಿತರು ಪತ್ರಕರ್ತರ ವಿರುದ್ಧ ನಡೆಸಿದ್ದ ದಾಳಿಯಲ್ಲಿ ತಾವು ಭಾಗಿಯಾಗಿದ್ದಾಗಿ ಒಪ್ಪಿಕೊಂಡರು. ಈ ಸಂದರ್ಭದಲ್ಲಿಯೇ ಇವರಿಬ್ಬರೂ ಲಷ್ಕರ್‌–ಎ–ತಯಬಾದ (ಎಲ್‌ಇಟಿ) ಉಪ ಸಂಘಟನೆಯಾದ ಟಿಆರ್‌ಎಫ್‌ನ ಹೈಬ್ರಿಡ್‌ ಉಗ್ರರು ಎಂದು ತಿಳಿದುಬಂದಿತು’ ಎಂದು ವಿವರಿಸಿದರು.

ADVERTISEMENT

‘ಬಳಿಕ, ದಾಳಿಗೆ ಉಪಯೋಗಿಸಲಾಗಿದ್ದ ಪಿಸ್ತೂಲು, ಮ್ಯಾಗಜಿನ್‌, ಐದು ಸುತ್ತು ಮದ್ದುಗುಂಡುಗಳು ಹಾಗೂ ಒಂದು ಸುಧಾರಿತ ಸ್ಫೋಟಕವನ್ನು (ಐಇಡಿ) ಸೈದಾಪೋರಾ ಪಯೀನ್‌ ಗ್ರಾಮದ ತೋಟದಲ್ಲಿ ಭದ್ರತಾ ಪಡೆಯ ಸಿಬ್ಬಂದಿ ವಶಪಡಿಸಿಕೊಂಡರು’ ಎಂದೂ ಅವರು ಮಾಹಿತಿ ನೀಡಿದರು.

ಯೂಟ್ಯೂಬ್ ಸುದ್ದಿ ವಾಹಿನಿ ನಡೆಸುತ್ತಿದ್ದ ಶೋಪಿಯಾನ್‌ ಜಿಲ್ಲೆಯ ಹೀರ್‌ಪೋರಾ ಪ್ರದೇಶದ ನಿವಾಸಿ ವಸೀಮ್ ಅಹ್ಮದ್ ವಾನಿ ಎಂಬುವವರ ಮೇಲೆ ಕಳೆದ ವರ್ಷ ಡಿಸೆಂಬರ್ 25ರಂದು ಬೈಕ್‌ನಲ್ಲಿ ಬಂದ ಇಬ್ಬರು ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ವಸೀಮ್‌ ಪ್ರಾಣಾಪಾಯದಿಂದ ಪಾರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.