ADVERTISEMENT

ಅಮೋನಿಯಾ ಗ್ಯಾಸ್‌ ಸೋರಿಕೆ: ಇಬ್ಬರು ಸಾವು

ಪಿಟಿಐ
Published 24 ಡಿಸೆಂಬರ್ 2020, 3:39 IST
Last Updated 24 ಡಿಸೆಂಬರ್ 2020, 3:39 IST

ನವದೆಹಲಿ/ಲಖನೌ: ಉತ್ತರಪ್ರದೇಶದ ಅಲಹಾಬಾದ್‌ ಸಮೀಪದ ಫುಲ್ಪರ್‌ನಲ್ಲಿನ ರಾಸಾಯನಿಕ ಗೊಬ್ಬರ ತಯಾರಿಕಾ ಪ್ರಧಾನ ಘಟಕದಲ್ಲಿ ಅಮೋನಿಯಾ ಗ್ಯಾಸ್‌ ಸೋರಿಕೆಯಾಗಿದ್ದರಿಂದ ಇಂಡಿಯನ್‌ ಫಾರ್ಮರ್‌ ಫರ್ಟಿಲೈಸರ್‌ ಕೋ–ಆಪರೇಟಿವ್‌ನ (ಇಫ್ಕೋ) ಇಬ್ಬರು ಅಧಿಕಾರಿಗಳು ಮೃತಪಟ್ಟಿದ್ದಾರೆ.

ಮಂಗಳವಾರ ರಾತ್ರಿ ಸುಮಾರು 10.30ಕ್ಕೆ ಗ್ಯಾಸ್‌ ಸೋರಿಕೆಯಾಗುತ್ತಿರುವುದು ತಿಳಿದುಬಂತು. ಅಮೋನಿಯಾ ಪ್ಲಂಗರ್‌ ಪಂಪ್‌ ಇದ್ದಕ್ಕಿದ್ದಂತೆ ಒಡೆದುಹೋಗಿ, ಗ್ಯಾಸ್‌ ಸೋರಿಕೆ ಆರಂಭವಾಯಿತು. ಕೂಡಲೇ ಅದನ್ನು ಸರಿಪಡಿಸಲಾಯಿತು ಎಂದು ಫರ್ಟಿಲೈಸರ್‌ ಕೋ–ಆಪರೇಟಿವ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇಫ್ಕೋದ ಉಪ ವ್ಯವಸ್ಥಾಪಕ ಅಭಯ್‌ ನಂದನ್‌ ಹಾಗೂ ಸಹಾಯಕ ವ್ಯವಸ್ಥಾಪಕ ವಿ.ಪಿ ಸಿಂಗ್‌ ಮೃತಪಟ್ಟವರು.

ADVERTISEMENT

ಘಟನೆಯಲ್ಲಿ ಮೂರು ಮಂದಿ ಗುತ್ತಿಗೆ ಕಾರ್ಮಿಕರು ಸೇರಿದಂತೆ 16 ಮಂದಿಗೆ ಗಾಯಗಳಾಗಿವೆ. ಗಾಯಗೊಂಡವರಲ್ಲಿ ಇಬ್ಬರು ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, 14 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಂತ್ರಿಕ ದೋಷದ ಬಗ್ಗೆ ತನಿಖೆ ನಡೆಸಲು ಇಫ್ಕೋ ಆದೇಶ ನೀಡಿದ್ದು, ಘಟನೆ ಬಗ್ಗೆ ತನಿಖೆ ಮಾಡಲು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.