ADVERTISEMENT

ರಾಜಸ್ಥಾನದಲ್ಲಿ ಮಿಗ್–21 ವಿಮಾನ ಪತನ: ವಾಯುಪಡೆಯ ಇಬ್ಬರು ಪೈಲಟ್‌ಗಳ ಸಾವು

ಪಿಟಿಐ
Published 29 ಜುಲೈ 2022, 1:22 IST
Last Updated 29 ಜುಲೈ 2022, 1:22 IST
ಐಎಎನ್‌ಎಸ್ ಚಿತ್ರ
ಐಎಎನ್‌ಎಸ್ ಚಿತ್ರ   

ನವದೆಹಲಿ: ಭಾರತೀಯ ವಾಯುಪಡೆಯ ತರಬೇತಿ ವಿಮಾನ ಅಪಘಾತಕ್ಕೀಡಾಗಿ ಇಬ್ಬರು ಪೈಲಟ್‌ಗಳು ಮೃತಪಟ್ಟಿರುವ ಘಟನೆ ರಾಜಸ್ಥಾನದ ಬರ್ಮರ್‌ನಲ್ಲಿ ಗುರುವಾರ ರಾತ್ರಿ ನಡೆದಿದೆ.

ಎರಡು ಸೀಟಿನ ಮಿಗ್–21 ತರಬೇತಿ ವಿಮಾನವು ಉತರ್ಲೈ ವಾಯುನೆಲೆಯಿಂದ ಹೊರಟಿತ್ತು. ಈ ಸಂದರ್ಭ ರಾತ್ರಿ 9:10 ರ ಸುಮಾರಿಗೆ ಅಪಘಾತ ಸಂಭವಿಸಿದೆ, ಇದರಲ್ಲಿ ಇಬ್ಬರೂ ಪೈಲಟ್‌ಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಐಎಎಫ್ ತಿಳಿಸಿದೆ.

ಈ ಅಪಘಾತವು ಮತ್ತೊಮ್ಮೆ ಹಳೆಯ ಸೋವಿಯತ್ ಮೂಲದ ಮಿಗ್-21 ವಿಮಾನಗಳ ಕ್ಷಮತೆ ಬಗ್ಗೆ ಪ್ರಶ್ನೆ ಎತ್ತಿದೆ. 1960 ದಶಕದ ಆರಂಭದಲ್ಲಿ ಭಾರತದ ವಾಯುಪಡೆ ಸೇರಿದ ಮಿಗ್ ವಿಮಾನಗಳಿಂದ ಈವರೆಗೆ 200 ಅಪಘಾತಗಳು ಸಂಭವಿಸಿದೆ.

ADVERTISEMENT

‘ಐಎಎಫ್‌ನ ಎರಡು ಸೀಟಿನ ಮಿಗ್ -21 ತರಬೇತಿ ವಿಮಾನವು ಗುರುವಾರ ಸಂಜೆ ರಾಜಸ್ಥಾನದ ಉತರಲೈ ವಾಯುನೆಲೆಯಿಂದ ತರಬೇತಿಗಾಗಿ ತೆರಳಿತ್ತು’ ಎಂದು ಐಎಎಫ್ ಹೇಳಿಕೆಯಲ್ಲಿ ತಿಳಿಸಿದೆ.

"ರಾತ್ರಿ 9:10 ರ ಸುಮಾರಿಗೆ ವಿಮಾನವು ಬರ್ಮರ್ ಬಳಿ ಅಪಘಾತಕ್ಕೀಡಾಗಿದೆ. ಇಬ್ಬರೂ ಪೈಲಟ್‌ಗಳ ಸಾವಿಗೆ ಐಎಎಫ್ ವಿಷಾದ ವ್ಯಕ್ತಪಡಿಸಿದ್ದು, ದುಃಖಿತ ಕುಟುಂಬಗಳ ಜೊತೆ ಇರುತ್ತದೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅಪಘಾತದ ಕಾರಣವನ್ನು ಕಂಡುಹಿಡಿಯಲು ನ್ಯಾಯಾಲಯದ ವಿಚಾರಣೆಗೆ ಆದೇಶಿಸಲಾಗಿದೆ ಎಂದು ಐಎಎಫ್ ಹೇಳಿದೆ.

ಅಪಘಾತ ಕುರಿತಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.

ಇಬ್ಬರು ಪೈಲಟ್‌ಗಳ ಸಾವಿನ ಬಗ್ಗೆ ಸಿಂಗ್ ಟ್ವೀಟ್‌ನಲ್ಲಿ ದುಃಖ ವ್ಯಕ್ತಪಡಿಸಿದ್ದಾರೆ.

‘ರಾಜಸ್ಥಾನದ ಬಾರ್ಮರ್ ಬಳಿ ಐಎಎಫ್‌ನ ಮಿಗ್ -21 ತರಬೇತಿ ವಿಮಾನ ಅಪಘಾತಕ್ಕೀಡಾಗಿ ಇಬ್ಬರು ಏರ್ ವಾರಿಯರ್‌ಗಳನ್ನು ಕಳೆದುಕೊಂಡಿದ್ದರಿಂದ ತೀವ್ರ ದುಃಖವಾಗಿದೆ. ದೇಶಕ್ಕೆ ಅವರ ಸೇವೆಯನ್ನು ಎಂದಿಗೂ ಮರೆಯಲಾಗುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ಮೃತಪಟ್ಟ ಇಬ್ಬರು ಪೈಲಟ್‌ಗಳ ಹೆಸರನ್ನು ಐಎಎಫ್ ಇನ್ನೂ ಬಹಿರಂಗಪಡಿಸಿಲ್ಲ.

ಮಿಗ್-21 ವಿಮಾನಗಳು ದೀರ್ಘಕಾಲದವರೆಗೆ ವಾಯುಪಡೆಯ ಮುಖ್ಯ ಆಧಾರವಾಗಿದ್ದವು. ಆದರೆ, ಈ ವಿಮಾನವು ಅತ್ಯಂತ ಕಳಪೆ ಸುರಕ್ಷತಾ ದಾಖಲೆಯನ್ನು ಹೊಂದಿವೆ.

ಕಳೆದ ಐದು ವರ್ಷಗಳಲ್ಲಿ ಮೂರೂ ಸೇನಾಪಡೆಗಳ ವಿಮಾನ ಮತ್ತು ಹೆಲಿಕಾಪ್ಟರ್‌ಗಳ ಅಪಘಾತಗಳಲ್ಲಿ 42 ರಕ್ಷಣಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಮಾರ್ಚ್‌ನಲ್ಲಿ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಮಾರ್ಚ್‌ನಲ್ಲಿ ರಾಜ್ಯಸಭೆಗೆ ತಿಳಿಸಿದ್ದರು.

ಕಳೆದ ಐದು ವರ್ಷಗಳಲ್ಲಿ 45 ವಿಮಾನ ಅಪಘಾತಗಳು ಸಂಭವಿಸಿದ್ದು, ಅದರಲ್ಲಿ 29 ವಾಯುಪಡೆಯ ವಿಮಾನಗಳ ಅಪಘಾತಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.