ADVERTISEMENT

ಕೃಷ್ಣಾ ನದಿ ಜಲವಿವಾದ: ವಿಚಾರಣೆಯಿಂದ ಹಿಂದೆ ಸರಿದ ಇಬ್ಬರು ನ್ಯಾಯಮೂರ್ತಿಗಳು

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 15:20 IST
Last Updated 10 ಜನವರಿ 2022, 15:20 IST
   

ನವದೆಹಲಿ: ಕರ್ನಾಟಕ ಸೇರಿದಂತೆ ದಕ್ಷಿಣದ ನಾಲ್ಕು ರಾಜ್ಯಗಳ ನಡುವಿನ ಕೃಷ್ಣಾ ನದಿ ಜಲವಿವಾದ ಕುರಿತ ಪ್ರಕರಣದ ವಿಚಾರಣೆಯಿಂದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದಡಿ.ವೈ.ಚಂದ್ರಚೂಡ್‌ ಮತ್ತು ಎ.ಎಸ್‌.ಬೋಪಣ್ಣ ಅವರು ಹಿಂದೆ ಸರಿದಿದ್ದಾರೆ.

ಸೋಮವಾರ ಪ್ರಕರಣವು ವಿಚಾರಣೆಗೆ ಬರುತ್ತಿದ್ದಂತೆ ನ್ಯಾಯಮೂರ್ತಿ ಚಂದ್ರಚೂಡ್‌ ಅವರು, ‘ನಾವು ಮೂಲತಃ ಕ್ರಮವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದವರು’ ಎಂಬುದನ್ನು ಉಲ್ಲೇಖಿಸಿದರು.

ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣ ನಡುವೆ ಕೃಷ್ಣಾ ನದಿ ಜಲವಿವಾದವಿದೆ. ವಿವಿಧ ರಾಜ್ಯಗಳನ್ನು ಪ್ರತಿನಿಧಿಸಿದ್ದ ವಕೀಲರು, ‘ತಮ್ಮದೇನೂ ಆಕ್ಷೇಪವಿಲ್ಲ’ ಎಂದು ಪೀಠಕ್ಕೆ ತಿಳಿಸಿದರು.

ADVERTISEMENT

ಆದರೆ, ಚಂದ್ರಚೂಡ್ ಅವರು, ಇದೇ ಕಾರಣದಿಂದಾಗಿ ಈ ಹಿಂದೆ ನ್ಯಾಯಮೂರ್ತಿಗಳಾದ ಎ.ಎಂ.ಖಾನ್‌ವಿಲ್ಕರ್‌ ಮತ್ತು ಮೋಹನ್‌ ಎಂ.ಶಾಂತನಗೌಡರ್‌ ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದರು ಎಂಬುದನ್ನು ನೆನಪಿಸಿದರು.

ನಾವು ಈ ಪ್ರಕರಣದಿಂದ ದೂರ ಉಳಿಯುತ್ತೇವೆ. ಈ ವಿಷಯವನ್ನು ಇನ್ನೊಂದು ಪೀಠದ ವಿಚಾರಣೆಗೆ ಬಿಡುವುದು ಸೂಕ್ತ ಎಂದು ಹೇಳಿದರು. ಬೇರೆ ಪೀಠಕ್ಕೆ ವಹಿಸುವ ಕುರಿತು ಮುಖ್ಯ ನ್ಯಾಯಮೂರ್ತಿ ತೀರ್ಮಾನಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.